ತಿರುವನಂತಪುರ ವಿಮಾನ ನಿಲ್ದಾಣ: ಬಿಡ್ ಸಲ್ಲಿಕೆಗೆ ಅದಾನಿ ನಂಟಿನ ಕಾನೂನುಸಂಸ್ಥೆಯ ಸಲಹೆ ಪಡೆದಿದ್ದ ಕೇರಳ ಸರಕಾರ

Update: 2020-08-23 17:49 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ,ಆ.23: ಕೇರಳ ಸರಕಾರವು ಇನ್ನೊಮ್ಮೆ ವಿವಾದದಲ್ಲಿ ಸಿಲುಕಿದೆ. ತಿರುವನಂತಪುರ ವಿಮಾನ ನಿಲ್ದಾಣದ ಖಾಸಗೀಕರಣಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅದಾನಿ ಕುಟುಂಬದೊಂದಿಗೆ ನಿಕಟ ನಂಟು ಹೊಂದಿರುವ ಕಾನೂನು ಸಂಸ್ಥೆಯ ಸೇವೆಯನ್ನು ಸರಕಾರವು ಪಡೆದುಕೊಂಡಿದ್ದು ಈ ಹೊಸವಿವಾದಕ್ಕೆ ಕಾರಣವಾಗಿದೆ.

ಬಿಡ್‌ನಲ್ಲಿ ಕೇರಳ ಸರಕಾರವು ಸೋತಿದ್ದು,ಅದಾನಿ ಗ್ರೂಪ್ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಿಡ್‌ನ್ನು ಗೆದ್ದುಕೊಂಡಿತ್ತು. ಈ ಬಿಡ್‌ಗಾಗಿ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ವ್ಯಯಿಸಿದ್ದ 2.36 ಕೋ.ರೂ.ಗಳ ಪೈಕಿ 55,39,522 ರೂ.ಗಳನ್ನು ವೃತ್ತಿಪರ ಶುಲ್ಕವಾಗಿ ಸಿರಿಲ್ ಅಮರಚಂದ ಮಂಗಲದಾಸ (ಸಿಎಂಎಂ) ಕಾನೂನು ಸಂಸ್ಥೆಗೆ ಪಾವತಿಸಲಾಗಿತ್ತು ಎನ್ನುವುದನ್ನು ಆರ್‌ಟಿಐ ಅರ್ಜಿಯೊಂದು ಬಹಿರಂಗಗೊಳಿಸಿದೆ.

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ ಅದಾನಿಯವರ ಹಿರಿಯ ಪುತ್ರ ಕರಣ್ ಅದಾನಿಯನ್ನು ವಿವಾಹವಾಗಿರುವ ಪರಿಧಿ ಅದಾನಿ ಈ ಕಾನೂನು ಸಂಸ್ಥೆಯ ಸಹಮಾಲಿಕರಾಗಿದ್ದಾರೆ. ಆಕೆ ಕಾನೂನು ಸಂಸ್ಥೆಯ ಮಾಲಿಕತ್ವ ಹೊಂದಿರುವ ಸ್ಥಾಪಕ ಸಿರಿಲ್ ಶ್ರಾಫ್ ಅವರ ಪುತ್ರಿಯಾಗಿದ್ದಾರೆ. ಸಿರಿಲ್ ಮತ್ತು ಅವರ ಪತ್ನಿ ವಂದನಾ ಶ್ರಾಫ್ ದೇಶದ ಪ್ರಸಿದ್ಧ ಕಾರ್ಪೊರೇಟ್ ಲಾಯರ್‌ಗಳಾಗಿದ್ದಾರೆ. ಕರಣ್ ಅದಾನಿ ವಿಳಿಂಜಂ ಬಂದರು ಯೋಜನೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದು,ಕೇರಳ ಸರಕಾರದೊಂದಿಗೆ ನಿಕಟವಾಗಿ ವ್ಯವಹರಿಸುತ್ತಿದ್ದಾರೆ.

ಬಿಡ್ ಪ್ರಕ್ರಿಯೆಯಲ್ಲಿ ಸಿಎಎಂ ಕಾನೂನು ಸಂಸ್ಥೆಯನ್ನು ಭಾಗಿಯಾಗಿಸಿದ್ದಕ್ಕಾಗಿ ಸ್ಪಷ್ಟನೆ ನೀಡುವಂತೆ ಸರಕಾರವನ್ನು ಆಗ್ರಹಿಸಿರುವ ಪ್ರತಿಪಕ್ಷ ನಾಯಕ ರಮೇಶ ಚೆನ್ನಿತಲ ಅವರು,ರಾಜ್ಯ ಸರಕಾರ ಮತ್ತು ಅದಾನಿ ಗ್ರುಪ್ ನಡುವೆ ಅಪವಿತ್ರ ಮೈತ್ರಿಯನ್ನು ಆರೋಪಿಸಿದ್ದಾರೆ.

ಬಿಜೆಪಿಯ ರಾಜ್ಯ ಘಟಕವೂ ಈ ಕಾನೂನು ಸಂಸ್ಥೆಯ ಸೇವೆಯನ್ನು ಪಡೆದುಕೊಂಡಿದ್ದನ್ನು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News