ಕಾಂಗ್ರೆಸ್ ಹೈಡ್ರಾಮಕ್ಕೆ ತೆರೆ: ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿರುವ ಸೋನಿಯಾ ಗಾಂಧಿ
ಹೊಸದಿಲ್ಲಿ, ಆ.24: ನಾಯಕತ್ವ ಬಿಕ್ಕಟ್ಟಿಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದಲ್ಲಿ ಎದ್ದಿದ್ದ ಭಿನ್ನಮತದ ಬಿರುಗಾಳಿ ತಾತ್ಕಾಲಿಕವಾಗಿ ಶಮನಗೊಂಡಿದೆ. ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದಿನ ಆರು ತಿಂಗಳವರೆಗೆ ಮುಂದುವರಿಯಲಿದ್ದಾರೆ. ಇಂದು ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯ ಏಳು ತಾಸುಗಳ ಮ್ಯಾರಥಾನ್ ಸಭೆಯ ಬಳಿಕ ಸೋನಿಯಾ ಅವರನ್ನು ಮುಂದಿನ ಎಐಸಿಸಿ ಮಹಾಧಿವೇಶನದವರೆಗೆ ಮಧ್ಯಂತರ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆಂಬ ನಿರ್ಣಯವನ್ನು ಅಂಗೀಕರಿಸಲಾಯಿತು.
ಪಕ್ಷದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಸೋನಿಯಾಗೆ ನೆರವಾಗಲು ಸಮಿತಿಯೊಂದನ್ನು ರಚಿಸಲು ಕೂಡಾ ಸಭೆಯಲ್ಲಿ ನಿರ್ಧರಿಸಲಾಯಿತು.
ಸಿಡಬ್ಲ್ಯುಸಿ ಸಭೆಯ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ಪಿ.ಎಲ್.ಪುನಿಯಾ ಹೇಳಿಕೆ ನೀಡಿ ಎಲ್ಲಾ ಸಿಡಬ್ಲ್ಯುಸಿ ಸದಸ್ಯರು ಸೋನಿಯಾ ಹಾಗೂ ರಾಹುಲ್ ಅವರಲ್ಲಿ ಒಕ್ಕೊರಲ ವಿಶ್ವಾಸ ವ್ಯಕ್ತಪಡಿಸಿದ್ದಾರೆಂದು ಹೇಳಿದರು. ಮುಂದಿನ ಆರು ತಿಂಗಳೊಳಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಆಯ್ಕೆಗಾಗಿ ಎಐಸಿಸಿ ಅಧಿವೇಶನ ನಡೆನಡೆಯಲಿದ್ದು, ಅಲ್ಲಿಯವರೆಗೆ ಪಕ್ಷದ ಮಧ್ಯಾಂತರ ಅಧ್ಯಕ್ಷರಾಗಿ ಮುಂದುವರಿಯಲು ಸೋನಿಯಾ ಸಮ್ಮತಿಸಿದ್ದಾರೆಂದು ಪುನಿಯಾ ತಿಳಿಸಿದರು.
ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಸೇರಿದಂತೆ ಕಾಂಗ್ರೆಸ್‌ನಲ್ಲಿ ಸಮಗ್ರ ಬದಲಾವಣೆಗೆ ಒತ್ತಾಯಿಸಿ ಕಪಿಲ್ ಸಿಬಲ್, ಗುಲಾಂ ನಬಿ ಆಝಾದ್ , ಶಶಿ ತರೂರ್ ಸೇರಿದಂತೆ 23 ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಸೋನಿಯಾಗಾಂಧಿ ಪತ್ರ ಬರೆದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆದಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದಿಂದ ಹೊರತಾದವರು ನೇಮಕಗೊಂಡಲ್ಲಿ ಸಂಸದೀಯ ಮಂಡಳಿಯ ನೇಮಕವಾಗಬೇಕು ಹಾಗೂ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇರಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿತ್ತು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವ ತನ್ನ ನಿರ್ಧಾರಕ್ಕೆ ಅಚಲರಾಗಿದ್ದ ಸೋನಿಯಾ, ಮುಂದಿನ ಆರು ತಿಂಗಳವರೆಗೆ ಹುದ್ದೆಯಲ್ಲಿ ಮುಂದುವರಿಸಲು ಒಪ್ಪಿಕೊಂಡಿದ್ದಾರೆ. ಸಿಡಬ್ಲ್ಯುಸಿ ಸಭೆಯ ಬಳಿಕ ಮಾತನಾಡಿದ ಅವರು, ‘‘ ಕಾಂಗ್ರೆಸ್ ಪಕ್ಷವು ಒಂದು ದೊಡ್ಡ ಕುಟುಂಬವಾಗಿದೆ. ನಾನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವುದಿಲ್ಲ. ಆದರೂ, ಪಕ್ಷದವರೆಲ್ಲರೂ, ಅದರಲ್ಲೂ ವಿಶೇಷವಾಗಿ ಹಿರಿಯ ನಾಯಕರು ತಮ್ಮ ಕಳವಳಗಳನ್ನು ಪಕ್ಷದ ವೇದಿಕೆಯಲ್ಲಿ ಮಾತ್ರವೇ ವ್ಯಕ್ತಪಡಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರನ್ನು ನೇಮಕಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಸೋನಿಯಾಗಾಂಧಿ ಸಿಡಬ್ಲ್ಯುಸಿ ಸದಸ್ಯರಿಗೆ ಸೂಚಿಸಿದ್ದಾರೆ. ವಿಡಿಯೋ ಕಾನ್ಭರೆನ್ಸಿಂಗ್ ಮೂಲಕ ನಡೆದ ಸಭೆಯಲ್ಲಿ ಮನಮೋಹನ್‌ಸಿಂಗ್, ಎ.ಕೆ. ಆ್ಯಂಟನಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಸೋನಿಯಾರನ್ನು ಪಕ್ಷಾಧ್ಯಕ್ಷರಾಗಿ ಮುಂದುವರಿಯವಂತೆ ಆಗ್ರಹಿಸಿದರು.
ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದ 23 ಮಂದಿ ಭಿನ್ನಮತೀಯ ನಾಯಕರ ಪೈಕಿ ಗುಲಾಂ ನಬಿ ಆಝಾದ್, ಆನಂದ್ ಶರ್ಮಾ ಹಾಗೂ ಮುಕುಲ್ ವಾಸ್ನಿಕ್ ಅವರು ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷಕ್ಕೆ ಸೋನಿಯಾರ ಕೊಡುಗೆಯನ್ನು ಪ್ರಶಂಸಿಸಿದರು. ಪಕ್ಷದ ನಾಯಕತ್ವವನ್ನು ಪ್ರಶ್ನಿಸುವುದು ತಮ್ಮ ಉದ್ದೇಶವಾಗಿರಲಿಲ್ಲವೆಂದವರು ಹೇಳಿದ್ದಾರೆ.
ಈ ಮಧ್ಯೆ ಪಕ್ಷದ ಅಧ್ಯಕ್ಷೆ ಅಂಬಿಕಾ ಸೋನಿಯಾ ಅವರು, ಭಿನ್ನಮತೀಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪಕ್ಷದಲ್ಲಿ ಹಿರಿಯರಿಗೆ ಮತ್ತು ಕಿರಿಯರಿಗೆ ಸಮಾನ ಕಾನೂನುಗಳು ಅನ್ವಯವಾಗಬೇಕೆಂದು ಅವರು ಹೇಳಿದ್ದಾರೆ. ಜಾರ್ಖಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸೋನಿಯಾ ಅವರ ಪಾತ್ರವನ್ನು ಮಾಜಿ ಕೇಂದ್ರ ಸಚಿವ ಆರ್.ಪಿ.ಎನ್.ಸಿಂಗ್ ಸಭೆಯಲ್ಲಿ ಶ್ಲಾಘಿಸಿದರು.
ಸೋನಿಯಾಗಾಂಧಿ ಅವರು ಆಗಸ್ಟ್ 10ರಂದು ಕಾಂಗ್ರೆಸ್ ಪಕ್ಷದ ಮಧ್ಯಂತರ ಅಧ್ಯಕ್ಷೆಯಾಗಿ ತಮ್ಮ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಅವರು ಮೇ 1998ರಿಂದ ಡಿಸೆಂಬರ್ 2017ರವರೆಗೆ 19 ವರ್ಷಗಳ ಕಾಲ ಪಕ್ಷದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಆನಂತರ 2017ರ ಡಿಸೆಂಬರ್‌ನಲ್ಲಿ ರಾಹುಲ್ ಪಕ್ಷದ ಚುಕ್ಕಾಣಿ ಹಿಡಿದಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರಾಜಯಕ್ಕೆ ನೈತಿಕ ಹೊಣೆ ಹೊತ್ತು ಅವರು ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.
ಮಧ್ಯಂತರ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುಗೆ ನೀಡಿದ್ದ ಸೋನಿಯಾ
ಹೊಸದಿಲ್ಲಿ, ಆ. 24: ಕೈ ನಾಯಕತ್ವದ ಕುರಿತಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಿಕ್ಕಟ್ಟು ಉಲ್ಬಣಿಸಿರುವ ನಡುವೆ ಇಂದು ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕೊಡುಗೆಯನ್ನು ಸೋನಿಯಾಗಾಂಧಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಮಗ್ರ ಬದಲಾವಣೆಗೆ ಆಗ್ರಹಿಸಿ 23 ಮಂದಿ ಹಿರಿಯ ನಾಯಕರು ಅಧ್ಯಕ್ಷೆ ಸೋನಿಯಾಗಾಂಧಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕಾರ್ಯಕಾರಿಣಿ ಸಭೆ ನಡೆದಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಿಡಬ್ಲುಬ್ಲ್ಯುಸಿ ಸಭೆಯಲ್ಲಿ ಸುಮಾರು 50 ಮಂದಿ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.
ರಾಜಸ್ಥಾನ, ಮಧ್ಯಪ್ರದೇಶದಲ್ಲಿನ ರಾಜಕೀಯ ಅಸ್ಥಿರತೆ, ಪಕ್ಷಾಧ್ಯಕ್ಷೆ ಸೋನಿಯಾಗಾಂಧಿಯವರ ಅನಾರೋಗ್ಯದ ನಡುವೆ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಭಿನ್ನಮತೀಯ ನಾಯಕರು ನಪತ್ರ ಬರೆದಿರುವುದರ ಔಚಿತ್ಯವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಸಚಿವರಾದ ಎ.ಕೆ.ಆ್ಯಂಟನಿ ಪ್ರಶ್ನಿಸಿದ್ದಾರೆ.
ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ಆರಂಭದಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕೊಡುಗೆಯನ್ನು ಸೋನಿಯಾ ಗಾಂಧಿ ನೀಡಿದರು. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿಯ ಹಾಗೂ ಗೋಚರಣೀಯವಾದ ನಾಯಕತ್ವದ ಅಗತ್ಯವಿದೆಯೆಂದು ಆಗ್ರಹಿಸಿ, ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರು ಸೇರಿದಂತೆ 26 ಹಿರಿಯ ಕಾಂಗ್ರೆಸ್ ನಾಯಕರು ಪತ್ರ ಬರೆದ ಬೆನ್ನಲ್ಲೇ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಕಪಿಲ್ ಸಿಬಲ್ ಅಲ್ಲದೆ, ಗುಲಾಂ ನಬಿ ಆಝಾದ್, ಶಶಿತರೂರ್, ಆನಂದ್ ಶರ್ಮಾ, ಪೃಥ್ವಿರಾಜ್ ಚೌಹಾಣ್ ಹಾಗೂ ವಿವೇಕ್ ತಾಂಕಾ ಈ ಪತ್ರಕ್ಕೆ ಸಹಿ ಹಾಕಿದ ಕೈ ನಾಯಕರಲ್ಲಿ ಪ್ರಮುಖರು.
ನಾಯಕತ್ವದ ಕುರಿತ ಅನಿಶ್ಚಿತತೆ ಹಾಗೂ ಪಕ್ಷದಲ್ಲಿನ ಒಡಕು ಕಾರ್ಯಕರ್ತರನ್ನು ಹಾಗೂ ಪಕ್ಷವನ್ನು ದುರ್ಬಲಗೊಳಿಸಿದೆ ಎಂದವರು ಪತ್ರದಲ್ಲಿ ಹೇಳಿದ್ದರೆ.