×
Ad

‘ವಂದೇ ಭಾರತ್’ ವಿಮಾನಯಾನಗಳಲ್ಲಿ ವಿದೇಶಗಳ ನೀಟ್ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಸುಪ್ರೀಂ ಸೂಚನೆ

Update: 2020-08-24 19:11 IST

ಹೊಸದಿಲ್ಲಿ,ಆ.24: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ ಗಳಿಗೆ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಗೆ ಹಾಜರಾಗಲು ಬಯಸುವ ಸಾಗರೋತ್ತರ ವಿದ್ಯಾರ್ಥಿಗಳಿಗೆ ವಂದೇ ಭಾರತ ವಿಮಾನಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಪರೀಕ್ಷೆಗೆ ಹಾಜರಾಗುವಲ್ಲಿ ಸಮಸ್ಯೆಗಳನ್ನು ನಿವಾರಿಸಲು ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಬಹುದಾಗಿದೆ ಎಂದು ನ್ಯಾಯಾಲಯವು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಗೆ ಸೂಚನೆಯನ್ನೂ ನೀಡಿದೆ. ನೀಟ್ ಪರೀಕ್ಷೆಯನ್ನು ಎಂಸಿಐ ನಡೆಸುತ್ತದೆ.

ಜಂಟಿ ಪ್ರವೇಶ ಪರೀಕ್ಷೆ (ಜೀ)ಯನ್ನು ಆನ್‌ಲೈನ್ ಮೂಲಕ ನಡೆಸಬಹುದಾದರೆ ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನೂ ಆನ್‌ಲೈನ್‌ನಲ್ಲಿ ನಡೆಸುವುದನ್ನು ನೀವು ಪರಿಶೀಲಿಸಬೇಕು ಎಂದು ನ್ಯಾಯಾಲಯವು ಹೇಳಿತು.

  ಸಾಗರೋತ್ತರ ನೀಟ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವಂತೆ ಕೋರಿ ವಿದೇಶಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬರೆಯಲು ಭಾರತಕ್ಕೆ ಬರಲು ಸಾಧ್ಯವಿಲ್ಲದ್ದರಿಂದ ಜೀ ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವಂತೆ ನೀಟ್ ಕೂಡ ಅಂತಹ ಕೇಂದ್ರಗಳನ್ನು ಹೊಂದಿರಬೇಕು ಎಂದು ಅರ್ಜಿದಾರರು ವಾದಿಸಿದ್ದರು.

ಈ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಭಾರತಕ್ಕೆ ಬರಲು ಅವಕಾಶ ನೀಡಬಹುದು ಎನ್ನುವುದನ್ನು ಸಂಬಂಧಿಸಿದ ಸಚಿವಾಲಯಗಳಿಗೆ ತಿಳಿಸಿ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯವು ಸೂಚಿಸಿತು.

ಕ್ವಾರಂಟೈನ್ ಷರತ್ತುಗಳಿಗೆ ಒಪ್ಪಿಕೊಂಡು,ತಾವು ಪರೀಕ್ಷೆಯ ಉದ್ದೇಶದಿಂದಲೇ ಭಾರತಕ್ಕೆ ಬರುತ್ತಿದ್ದೇವೆ ಎನ್ನುವುದನ್ನು ವಿದ್ಯಾರ್ಥಿಗಳು ಸಾಬೀತುಗೊಳಿಸಿದರೆ ನ್ಯಾಯಾಲಯದ ಸೂಚನೆಯನ್ನು ಪಾಲಿಸಬಹುದಾಗಿದೆ ಎಂದು ಮೆಹ್ತಾ ತಿಳಿಸಿದರು.

ಕ್ವಾರಂಟೈನ್ ಷರತ್ತುಗಳನ್ನು ಸಡಿಲಿಸುವ ಬಗ್ಗೆ ತಾನು ನಿರ್ದೇಶ ಹೊರಡಿಸುವಂತಿಲ್ಲ ಎಂದು ನ್ಯಾಯಾಲಯವು ಹೇಳಿತಾದರೂ,ಈ ವಿಷಯವನ್ನು ಪರಿಶೀಲಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News