ಲೈಂಗಿಕ ಕಿರುಕುಳ ಆರೋಪ: ಕ್ಷಮೆ ಕೋರುವಂತೆ ಅಸ್ಸಾಂ ರೈಫಲ್ಸ್‌ಗೆ ವೈಎಂಎ ಆಗ್ರಹ

Update: 2020-08-24 14:00 GMT

ಐಜ್ವಾಲ್ (ಮಿಝೋರಾಂ),ಆ.24: ಭಾರತ-ಮ್ಯಾನ್ಮಾರ್ ಗಡಿಯನ್ನು ಕಾಯುತ್ತಿರುವ ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿಗಳು ಸ್ವಾತಂತ್ರ್ಯ ದಿನದಂದು ಚಂಫಾಯಿ ಜಿಲ್ಲೆಯ ಸೆಸಿ ಗ್ರಾಮದಲ್ಲಿ ತಮ್ಮ ಹೊಲಗಳಿಂದ ಮನೆಗೆ ಮರಳುತ್ತಿದ್ದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದರು ಮತ್ತು ಪಡೆಯ ಸಿಬ್ಬಂದಿಗಳು ಕೋವಿಡ್-19 ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮಿಝೋರಾಂ ನ ಪ್ರಬಲ ಸಂಘಟನೆ ಯಂಗ್ ಮಿರೆ ಅಸೋಸಿಯೇಷನ್ (ವೈಎಂಎ) ಆರೋಪಿಸಿದೆ. ಇದಕ್ಕಾಗಿ ಅಸ್ಸಾಂ ರೈಫಲ್ಸ್ ಕ್ಷಮೆ ಯಾಚಿಸಬೇಕು ಎಂದು ಅದು ಆಗ್ರಹಿಸಿದೆ. ಆದರೆ ಅಸ್ಸಾಂ ರೈಫಲ್ಸ್ ಈ ಆರೋಪಗಳನ್ನು ನಿರಾಕರಿಸಿದೆ.

ಅಸ್ಸಾ ರೈಫಲ್ಸ್ ಈ ತಿಂಗಳ ಅಂತ್ಯದೊಳಗೆ ಕ್ಷಮೆ ಯಾಚಿಸದಿದ್ದರೆ ತಾನು ಕಠಿಣ ಕ್ರಮ ಕೈಗೊಳ್ಳುವುದಾಗಿ ವೈಎಂಎ ಕೇಂದ್ರ ಸಮಿತಿಯು ಹೇಳಿಕೆಯೊಂದರಲ್ಲಿ ಎಚ್ಚರಿಕೆ ನೀಡಿದೆ.

ಅಸ್ಸಾಂ ರೈಫಲ್ಸ್ ಸಿಬ್ಬಂದಿ ವರ್ತನೆ ಆರೋಪ ಕುರಿತು ಮುಖ್ಯಮಂತ್ರಿ ಝೋರಾಮ್ ಥಂಗ ಅವರು ಶನಿವಾರ ವೈಎಂಎ ನಾಯಕರೊಡನೆ ಮಾತುಕತೆ ನಡೆಸಿದ್ದರು. ಸುರಕ್ಷತಾ ಶಿಷ್ಟಾಚಾರಗಳನ್ನು ಅಗೌರವಿಸುವಲ್ಲಿ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಗೈರುಹಾಜರಾಗುವಲ್ಲಿ ಅಸ್ಸಾಂ ರೈಫಲ್ಸ್‌ನ ಅನುಚಿತ ವರ್ತನೆಯ ಬಗ್ಗೆ ಕೇಂದ್ರ ಗೃಹಸಚಿವಾಲಯಕ್ಕೆ ಪ್ರತ್ಯೇಕ ಪತ್ರಗಳನ್ನು ಬರೆಯಲು ರಾಜ್ಯ ಸರಕಾರ ಮತ್ತು ವೈಎಂಎ ಈ ವೇಳೆ ನಿರ್ಧರಿಸಿದ್ದವು ಎಂದು ಅಧಿಕಾರಿಯೋರ್ವರು ತಿಳಿಸಿದರು.

46ನೇ ಬಟಾಲಿಯನ್‌ನ 15 ಸಿಬ್ಬಂದಿಗಳು ಆ.18ರಂದು ಕಡ್ಡಾಯ ತಪಾಸಣೆಗೊಳಗಾಗದೆ ಬಲವಂತದಿಂದ ಮಿಝೋರಾಂ ಪ್ರವೇಶಿಸಿದ್ದರು. ಈ ಸಿಬ್ಬಂದಿಗಳ ಪ್ರವೇಶಕ್ಕೆ ನೆರವಾಗಲು ಮತ್ತು ನಾಗರಿಕ ಆಡಳಿತವನ್ನು ಬೆದರಿಸಲು 25 ಸಿಬ್ಬಂದಿಗಳನ್ನು ಐಜ್ವಾಲ್‌ನಿಂದ ವೈರಂಗ್ಟೆ ಗಡಿ ತನಿಖಾ ಠಾಣೆಗೆ ಕಳುಹಿಸಲಾಗಿತ್ತು ಎಂದು ರಾಜ್ಯ ಗೃಹಸಚಿವಾಲಯವು ಆರೋಪಿಸಿದೆ.

ಈ ಆರೋಪವನ್ನು ನಿರಾಕರಿಸಿರುವ ಅಸ್ಸಾಂ ರೈಫಲ್ಸ್,ಭದ್ರತಾ ಸಿಬ್ಬಂದಿಗಳ ಅಂತರರಾಜ್ಯ ಚಲನವಲನಗಳನ್ನು ನಿರ್ಬಂಧಿಸುವ ಮೂಲಕ ಮಿಝೋರಾಂ ಸರಕಾರವು ಕೇಂದ್ರ ಗೃಹ ಸಚಿವಾಲಯದ ನಿರ್ದೇಶಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ತನ್ನ ಸಿಬ್ಬಂದಿಗಳು ಸೆಸಿ ಗ್ರಾಮದಲ್ಲಿ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ಸ್ವಾತತ್ರ್ಯೋತ್ಸವಕ್ಕೆ ಪಡೆಯು ಗೈರುಹಾಜರಾಗಿತ್ತು ಎಂಬ ಆರೋಪಗಳನ್ನೂ ಅಸ್ಸಾಂ ರೈಫಲ್ಸ್ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News