ಗ್ರಾಮೀಣ ಅಭಿವೃದ್ಧಿ ಸಚಿವಾಲಯದಲ್ಲಿ 2,000 ಹುದ್ದೆಗಳು ಖಾಲಿ ಎಂಬ ಸಂದೇಶ ಸುಳ್ಳು
ಹೊಸದಿಲ್ಲಿ, ಆ. 24: ಗ್ರಾಮೀಣ ಅಭಿವೃದ್ಧಿ ಸಚಿವಾಲಯದಲ್ಲಿ 2,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುಗಾಗಿ ಪ್ರಕಟಿಸಲಾದ ಅಧಿಸೂಚನೆ ನಕಲಿ. ಈ ಅಧಿಸೂಚನೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ಪ್ರಚಾರವಾಗಿತ್ತು. ಸಚಿವಾಲಯ ಇಂತಹ ಅಧಿಸೂಚನೆ ಹೊರಡಿಸಿಲ್ಲ ಎಂದು ಕೇಂದ್ರ ಸರಕಾರದ ಸತ್ಯ ಶೋಧನಾ ತಂಡ ತಿಳಿಸಿದೆ.
ಇದು ಸಿಇಎನ್ ಅಥವಾ ಕೇಂದ್ರೀಕೃತ ಉದ್ಯೋಗದ ಪ್ರಕಟನೆ ಎಂದು ಅಧಿಸೂಚನೆ ಹೇಳಿತ್ತು. ವಿವಿಧ ನೇಮಕಾತಿಗೆ ಸಿಇಎನ್ ಅನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡುತ್ತದೆ. ಗ್ರಾಮಗಳು ಹಾಗೂ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಈ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಎಂದು ಅಧಿಸೂಚನೆ ಹೇಳಿತ್ತು.
ಆದರೆ ಈ ಅಧಿಸೂಚನೆ ನಕಲಿ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಧಿಕೃತ ವೆಬ್‌ಸೈಟ್ ಎಂದು ಸತ್ಯ ಶೋಧನಾ ತಂಡ ತಿಳಿಸಿದೆ. ಸಾವಿರಾರು ಉದ್ಯೋಗ ಖಾಲಿ ಇವೆ ಎಂದು ಪ್ರತಿಪಾದಿಸಿ ಅಭ್ಯರ್ಥಿಗಳಿಂದ ಶುಲ್ಕ ವಸೂಲಿ ಮಾಡುವ ಇಂತಹ ಹಲವು ಅಧಿಸೂಚನೆಗಳನ್ನು ಸತ್ಯ ಶೋಧನೆ ತಂಡ ಪತ್ತೆ ಹಚ್ಚಿದೆ. ಇತ್ತೀಚೆಗೆ 5,000 ಹುದ್ದೆಗಳು ಖಾಲಿ ಇವೆ ಎಂದು ರೈಲ್ವೆ ಸಚಿವಾಲಯ ಹೊರಡಿಸಿದೆ ಎನ್ನಲಾದ ಅಧಿಸೂಚನೆ ಕೂಡ ನಕಲಿ. ಕೆಲವು ದಿನಗಳ ಹಿಂದೆ ಇನ್ನೊಂದು ಉದ್ಯೋಗ ಸಂಬಂಧಿ ಜಾಹೀರಾತಿನಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ‘ವಿಶೇಷ ರಕ್ಷಣಾ ಅಧಿಕಾರಿಗಳ ವೇದಿಕೆ’ಯಲ್ಲಿ 500 ಹುದ್ದೆಗಳು ಖಾಲಿ ಇವೆ ಎಂದು ಪ್ರಕಟಿಸಲಾಗಿತ್ತು. ಆದರೆ, ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಇಂತಹ ಸಂಸ್ಥೆ ಇಲ್ಲ ಎಂದು ಸತ್ಯ ಶೋಧನಾ ಸಮಿತಿ ಹೇಳಿದೆ.