ಕೊರೋನ ಸಂತ್ರಸ್ತರಿಗೆ ಪರಿಹಾರ ನೀಡಲು ರಾಷ್ಟ್ರೀಯ ಕಾರ್ಯನೀತಿ : ಅರ್ಜಿ ತಿರಸ್ಕರಿಸಿದ ಸುಪ್ರೀಂ
ಹೊಸದಿಲ್ಲಿ, ಆ.24: ಕೊರೋನ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಏಕರೂಪದ ಪರಿಹಾರ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಕಾರ್ಯನೀತಿಯನ್ನು ರೂಪಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಕೊರೋನ ಸೋಂಕಿನಿಂದ ಮೃತಪಟ್ಟವರ ಕುಟುಂಬದವರಿಗೆ, ವಿಶೇಷವಾಗಿ ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ, ಪೊಲೀಸರು, ಸರಕಾರಿ ಸಿಬ್ಬಂದಿ, ಪತ್ರಕರ್ತರ ಸಹಿತ ಮುಂಚೂಣಿ ಕಾರ್ಯಕರ್ತರ ಕುಟುಂಬದವರಿಗೆ ದೇಶದಾದ್ಯಂತ ಏಕರೂಪದ ಪರಿಹಾರ ಮೊತ್ತ ಒದಗಿಸಲು ಕಾರ್ಯನೀತಿ ರೂಪಿಸಲು ಕೇಂದ್ರ ಸರಕಾರಕ್ಕೆ ಹಾಗೂ ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಪ್ರತೀ ರಾಜ್ಯವೂ ವಿಭಿನ್ನ ಕಾರ್ಯನೀತಿ ಹೊಂದಿದ್ದು ತನ್ನ ಆರ್ಥಿಕ ಬಲದ ಆಧಾರದಲ್ಲಿ ಪರಿಹಾರ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರಾದ ಅಶೋಕ್ ಭೂಷಣ್ ಹಾಗೂ ಆರ್‌ಎಸ್ ರೆಡ್ಡಿಯವರಿದ್ದ ನ್ಯಾಯಪೀಠ ಅರ್ಜಿಯನ್ನು ತಳ್ಳಿಹಾಕಿದೆ.
ದೇಶದಲ್ಲಿ ಕೊರೋನದಿಂದ ಹಲವರು ಮೃತಪಟ್ಟಿದ್ದು ಸಂತ್ರಸ್ತರ ಕುಟುಂಬದವರಿಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಮೊತ್ತದ ಪರಿಹಾರ ಧನ ಸಿಗುತ್ತಿದೆ. ದಿಲ್ಲಿ ಸರಕಾರ 1 ಕೋಟಿ ರೂ. ನೀಡಿದರೆ, ಕೆಲವು ರಾಜ್ಯಗಳು 1 ಲಕ್ಷ ರೂ. ನೀಡುತ್ತಿವೆ . ಪರಿಹಾರ ನೀಡುವಲ್ಲಿ ಏಕರೂಪದ ನೀತಿಯ ಕೊರತೆಯಿದೆ. ಆದ್ದರಿಂದ ಸೂಕ್ತ ಪರಿಹಾರ ನೀತಿ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚನೆ ನೀಡಬೇಕು. ದೇಶದ ಬಹುತೇಕ ಜನತೆ ಆರ್ಥಿಕವಾಗಿ ದುರ್ಬಲ ವರ್ಗದವರಾಗಿದ್ದು, ಹೆಚ್ಚಿನ ಕುಟುಂಬದಲ್ಲಿ ಓರ್ವ ವ್ಯಕ್ತಿ ಮಾತ್ರ ದುಡಿಯುತ್ತಿದ್ದು ಈತನ ದುಡಿಮೆಯನ್ನು ಕುಟುಂಬ ಅವಲಂಬಿಸಿದೆ. ಈ ಜನರೂ ತೆರಿಗೆ ಪಾವತಿಸುತ್ತಿದ್ದಾರೆ. ದೇಶದಲ್ಲಿ ಕೊರೋನದಿಂದ ಮೃತರಾಗುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ , ಪರಿಹಾರ ಮೊತ್ತ ಪಾವತಿಸಲು ಸೂಕ್ತ ಮಾರ್ಗದರ್ಶಿ ಸೂತ್ರ ರೂಪಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.