ದ್ವೇಷ ಭಾಷಣಗಳ ಬಗ್ಗೆ ಅಂಖಿದಾಸ್ ‘ಪ್ರಭಾವವಿಲ್ಲದೆ’ ಮರುಪರಿಶೀಲನೆ ನಡೆಸಿ

Update: 2020-08-24 16:35 GMT

ಹೊಸದಿಲ್ಲಿ, ಆ. 24: ಭಾರತದಲ್ಲಿ ಫೇಸ್‌ಬುಕ್‌ನ ದ್ವೇಷ ಭಾಷಣ ನೀತಿಯ ಕುರಿತು ಪರಿಶೀಲನೆ ನಡೆಸುವಂತೆ ಆಗ್ರಹಿಸಿ 54 ನಿವೃತ್ತ ಐಎಎಸ್ ಅಧಿಕಾರಿಗಳ ಗುಂಪು ಸೋಮವಾರ ಫೇಸ್‌ಬುಕ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್ ಅವರಿಗೆ ಬಹಿರಂಗ ಪತ್ರ ಬರೆದಿದೆ.

“ಭಾರತದಲ್ಲಿ ಫೇಸ್‌ ಬುಕ್‌ ನ ದ್ವೇಷ ಭಾಷಣ ನೀತಿ ಪರಿಶೀಲನೆಗೆ ನೀವು ಗಂಭೀರ ಪ್ರಯತ್ನ ಮಾಡುತ್ತೀರಿ ಎಂಬ ನಿರೀಕ್ಷೆಯಿಂದ ನಾವು ಈ ಪತ್ರ ಬರೆಯುತ್ತಿದ್ದೇವೆ. ಇಂತಹ ಪರಿಶೀಲನೆ ಸಂದರ್ಭ ಫೇಸ್‌ಬುಕ್‌ನ ಸಾರ್ವಜನಿಕ ನೀತಿಯ ಭಾರತದ ಮುಖ್ಯಸ್ಥ ಅಂಖಿ ದಾಸ್ ಪರಿಶೀಲನೆಯ ಮೇಲೆ ಪ್ರಭಾವ ಬೀರುವ ಸ್ಥಾನದಲ್ಲಿ ಇರಬಾರದು” ಎಂದು ಗುಂಪು ಮನವಿ ಮಾಡಿದೆ.

ಕಾನ್‌ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ ಸಂಘಟನೆಯ ಸದಸ್ಯರಾದ ನಿವೃತ್ತ ಐಎಎಸ್ ಅಧಿಕಾರಿ ಹರ್ಷ ಮಂದರ್, ನಿವೃತ್ತ ಐಪಿಎಸ್ ಅಧಿಕಾರಿ ಶಾಫಿ ಆಲಂ, ನಿವೃತ್ತ ಐಎಎಸ್ ಅಧಿಕಾರಿ ಚಂದ್ರಶೇಖರ್ ಬಾಲಕೃಷ್ಣನ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸಲಾಹುದ್ದೀನ್ ಅಹ್ಮದ್ ಹಾಗೂ ಇತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಫೇಸ್‌ಬುಕ್‌ನ ದ್ವೇಷ ಭಾಷಣ ನೀತಿ ಬಗೆಗಿನ ಆಗಸ್ಟ್ 14ರ ವಾಲ್‌ಸ್ಟ್ರೀಟ್ ಜರ್ನಲ್‌ನ ಲೇಖನ ನಮ್ಮ ಗಮನ ಸೆಳೆದಿದಿದೆ. ತನ್ನ ಉದ್ಯಮಕ್ಕೆ ಉಂಟಾಗುವ ಹಾನಿ ತಪ್ಪಿಸಲು ಬಿಜೆಪಿ ನಾಯಕ ಹಾಗೂ ಇತರ ಹಿಂದೂ ರಾಷ್ಟ್ರವಾದಿ ವ್ಯಕ್ತಿಗಳು ಹಾಗೂ ಗುಂಪುಗಳ ದ್ವೇಷ ಭಾಷಣದ ಬಗ್ಗೆ ಭಾರತದಲ್ಲಿ ಫೇಸ್‌ಬುಕ್ ಕುರುಡಾಗುತ್ತಿದೆ ಎಂದು ಲೇಖನದಲ್ಲಿ ಹೇಳಲಾಗಿದೆ ಎಂದು ಗುಂಪು ತಿಳಿಸಿದೆ.

ಭಾರತದಲ್ಲಿ ದ್ವೇಷಭಾಷಣ ಅನುತ್ತೇಜಿಸುವ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ಫೇಸ್‌ಬುಕ್ ವಿಫಲವಾಗಿದೆ. ತನ್ನ ವಾಣಿಜ್ಯ ಹಿತಾಸಾಕ್ತಿ ಕಾಯ್ದುಗೊಳ್ಳುವ ಉದ್ದೇಶದಿಂದ ಫೇಸ್‌ಬುಕ್ ಈ ರೀತಿ ವರ್ತಿಸುತ್ತಿದೆ ಎಂದು ಕಾಣುತ್ತದೆ ಎಂದು ಪತ್ರ ಹೇಳಿದೆ. ಫೇಸ್‌ಬುಕ್‌ನ ಇಂತಹ ನಡವಳಿಕೆ ಇತರ ದೇಶಗಳಲ್ಲಿ ಕೂಡ ಚರ್ಚೆಯ ವಿಷಯವಾಗಿರುವುದನ್ನು ನಾವು ಗಮನಿಸಿದ್ದೇವೆ. ಮಾನವನ ಜೀವಕ್ಕಿಂತ ವಾಣಿಜ್ಯ ಹಿತಾಸಕ್ತಿ ಮುಖ್ಯವೇ ? ಎಂದು ಗುಂಪು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News