ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆಯ ಎರಡನೇ ಹಂತದ ಪ್ರಯೋಗ ಆರಂಭ

Update: 2020-08-26 16:19 GMT

ಪುಣೆ,ಆ.26: ಇಲ್ಲಿಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸುತ್ತಿರುವ,ಆಕ್ಸ್‌ಫರ್ಡ್ ವಿವಿಯು ಅಭಿವೃದ್ಧಿಗೊಳಿಸಿರುವ ಕೋವಿಡ್-19 ಲಸಿಕೆ ‘ಕೋವಿಶೀಲ್ಡ್ ’ನ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವು ಬುಧವಾರ ನಗರದ ಭಾರತಿ ವಿದ್ಯಾಪೀಠದ ವೈದ್ಯಕೀಯ ಕಾಲೇಜು,ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆರಂಭಗೊಂಡಿದೆ.

 ಪ್ರಯೋಗಕ್ಕೊಳಪಡಲು ಸ್ವಯಂ ಇಚ್ಛೆಯಿಂದ ಮುಂದೆ ಬಂದಿರುವ ಇಬ್ಬರು ಪುರುಷರಿಗೆ ಅವರ ಕೋವಿಡ್-19 ಮತ್ತು ಆ್ಯಂಟಿಬಾಡಿ ಪರೀಕ್ಷಾ ವರದಿಗಳು ನೆಗೆಟಿವ್ ಬಂದ ನಂತರ ಲಸಿಕೆ ನೀಡಲಾಗಿದೆ. ಈ ಪೈಕಿ 32 ವರ್ಷದ ವ್ಯಕ್ತಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರೆ, 48ರ ಹರೆಯದ ವ್ಯಕ್ತಿ ಆರೋಗ್ಯ ರಕ್ಷಣೆ ಕ್ಷೇತ್ರದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸಂಜಯ ಲಾಲ್ವಾನಿ ತಿಳಿಸಿದರು.

ಲಸಿಕೆ ನೀಡುವ ಮುನ್ನ ವೈದ್ಯರು ಅವರ ದೇಹದ ಉಷ್ಣತೆ,ರಕ್ತದೊತ್ತಡ ಮತ್ತು ಹೃದಯ ಬಡಿತಗಳ ತಪಾಸಣೆ ನಡೆಸಿದ್ದರು ಎಂದರು.

ಎಸ್‌ಐಐನಿಂದ ಲಸಿಕೆಯ ಡೋಸ್‌ಗಳು ಮಂಗಳವಾರ ಆಸ್ಪತ್ರೆಯನ್ನು ತಲುಪಿದ್ದು,ಐವರು ಸ್ವಯಂಸೇವಕರು ಪ್ರಯೋಗಕ್ಕೆ ಒಳಪಡಲು ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News