ನವಾಲ್ನಿಗೆ ವಿಷಪ್ರಾಶನ: ಸ್ವತಂತ್ರ ತನಿಖೆಗೆ ಬ್ರಿಟನ್ ಪ್ರಧಾನಿ ಕರೆ

Update: 2020-08-26 16:58 GMT

ಲಂಡನ್, ಆ. 2: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷವುಣಿಸಲಾಗಿದೆ ಎನ್ನಲಾದ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂದು ಬ್ರಿಟನ್ ಬಯಸುತ್ತದೆ ಎಂದು ಆ ದೇಶದ ಪ್ರಧಾನಿ ಬೊರಿಸ್ ಜಾನ್ಸನ್ ಬುಧವಾರ ಹೇಳಿದ್ದಾರೆ.

‘‘ನವಾಲ್ನಿಗೆ ಏನು ಆಯಿತು ಎಂಬ ಬಗ್ಗೆ ನಾವು ಸಂಪೂರ್ಣ ಹಾಗೂ ಪಾರದರ್ಶಕ ತನಿಖೆಯೊಂದನ್ನು ಬಯಸುತ್ತೇವೆ. ಈ ಕೃತ್ಯ ಮಾಡಿದವರು ಕಾನೂನಿನ ಕ್ರಮಕ್ಕೆ ಒಳಗಾಗಬೇಕು ಹಾಗೂ ಸಂತ್ರಸ್ತನಿಗೆ ನ್ಯಾಯ ಒದಗಿಸುವ ಅಂತರ್‌ರಾಷ್ಟ್ರೀಯ ಪ್ರಯತ್ನಗಳಲ್ಲಿ ಬ್ರಿಟನ್ ಕೈಜೋಡಿಸುತ್ತದೆ’’ ಎಂದು ಅವರು ನುಡಿದರು.

 ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟು ಟೀಕಾಕಾರರಾಗಿರುವ 44 ವರ್ಷದ ನವಾಲ್ನಿಯು ಗುರುವಾರ ಸೈಬೀರಿಯದಿಂದ ಮಾಸ್ಕೋಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ತೀವ್ರ ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದ್ದರು. ಬಳಿಕ ವಿಮಾನ ಸೈಬೀರಿಯದ ಓಮ್‌ಸ್ಕ್ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು ಅವರನ್ನು ಅಲ್ಲಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.

ಶನಿವಾರ ಅವರನ್ನು ಜರ್ಮನಿ ರಾಜಧಾನಿ ಬರ್ಲಿನ್‌ನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿತ್ತು.

2006ರಲ್ಲಿ ರಶ್ಯದ ಗುಪ್ತಚರ ಸಂಸ್ಥೆ ಕೆಜಿಬಿಯ ಮಾಜಿ ಏಜಂಟ್ ಅಲೆಕ್ಸಾಂಡರ್ ಲಿಟ್ವಿನೆಂಕೊರನ್ನು ಲಂಡನ್‌ನಲ್ಲಿ ವಿಷಕಾರಿ ವಿಕಿರಣ ಹಾಯಿಸಿ ಕೊಲೆ ಮಾಡಲಾಗಿತ್ತು ಹಾಗೂ ಈ ಕೊಲೆಯ ಹಿಂದೆ ಪುಟಿನ್ ಇದ್ದಾರೆ ಎಂದು ಆರೋಪಿಸಲಾಗಿತ್ತು.

2018ರಲ್ಲಿ ಆಗ್ನೇಯ ಇಂಗ್ಲೆಂಡ್‌ನ ಸ್ಯಾಲಿಸ್‌ಬರಿಯಲ್ಲಿ ರಶ್ಯದ ಡಬಲ್ ಏಜಂಟ್ ಸರ್ಗೀ ಸ್ಕ್ರಿಪಾಲ್‌ರನ್ನು ಸೇನೆಯಲ್ಲಿ ಬಳಸಲಾಗುವ ಅತಿ ವಿಷಕಾರಕ ರಾಸಾಯನಿಕವೊಂದನ್ನು ಬಳಸಿ ಕೊಲೆ ಮಾಡಲು ಯತ್ನಿಸಲಾಗಿತ್ತು. ಅದರ ಹಿಂದೆಯೂ ರಶ್ಯ ಸರಕಾರವಿತ್ತು ಎಂದು ಆರೋಪಿಸಲಾಗಿದೆ.

ನವಾಲ್ನಿಗೆ ವಿಷಪ್ರಾಶನವಾಗಿದೆ ಎಂಬ ಆರೋಪಗಳ ಬಗ್ಗೆ ‘ಸಂಪೂರ್ಣ ಹಾಗೂ ಸ್ವತಂತ್ರ’ ಅಂತರ್‌ರಾಷ್ಟ್ರೀಯ ತನಿಖೆ ನಡೆಸುವಂತೆ ಕಳೆದ ವಾರ ಸರ್ವಪಕ್ಷ ಬ್ರಿಟಿಶ್ ಸಂಸದರ ಗುಂಪೊಂದು ಲಂಡನ್‌ನಲ್ಲಿರುವ ರಶ್ಯ ರಾಯಭಾರಿಗೆ ಪತ್ರ ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News