ಎಸ್‌ಸಿ/ಎಸ್‌ಟಿ ಉಪವರ್ಗೀಕರಣ ತೀರ್ಪಿನ ಮರುಪರಿಶೀಲನೆ ಅಗತ್ಯ: ಸುಪ್ರೀಂಕೋರ್ಟ್

Update: 2020-08-27 15:09 GMT

ಹೊಸದಿಲ್ಲಿ, ಆ.27: ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದ ಸಂದರ್ಭ ಪರಿಶಿಷ್ಟ ಜಾತಿ ಮತ್ತು ಪಂಗಡ(ಎಸ್‌ಸಿ/ಎಸ್‌ಟಿ)ಕ್ಕೆ ಹಂಚಿಕೆಯಾಗಿರುವ ಸ್ಥಾನ ಭರ್ತಿ ಗೆ ಉಪವರ್ಗೀಕರಣ ಮಾಡಲು ರಾಜ್ಯಗಳಿಗೆ ಯಾವುದೇ ಹಕ್ಕು ಇಲ್ಲ ಎಂಬ ತನ್ನ 2004 ರ ತೀರ್ಪಿನ ಮರುಪರಿಶೀಲನೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

2004ರಲ್ಲಿ ಇವಿ ಚಿನ್ನಯ್ಯ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಮರುಪರಿಶೀಲನೆಯ ಅಗತ್ಯವಿದೆ. ಆದ್ದರಿಂದ ಈ ವಿಷಯವನ್ನು ಮುಖ್ಯ ನ್ಯಾಯಾಧೀಶರ ಎದುರು ಮಂಡಿಸಿ, ಅವರು ಸೂಕ್ತ ನಿರ್ದೇಶನ ನೀಡಬೇಕಾಗಿದೆ . 2004ರ ತೀರ್ಪನ್ನು ಸರಿಯಾಗಿ ನಿರ್ಧರಿಸಲಾಗಿಲ್ಲ. ರಾಜ್ಯ ಸರಕಾರಗಳು ಎಸ್‌ಸಿ/ಎಸ್‌ಟಿ ಸಮುದಾಯದೊಳಗೆ ಉಪವರ್ಗೀಕರಣ ಮಾಡಲು ಸಾಧ್ಯವಾಗುವಂತೆ ನಿಯಮ ರೂಪಿಸಬೇಕು ಎಂದು ನ್ಯಾಯಾಧೀಶ ಅರುಣ್ ಮಿಶ್ರ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಅಭಿಪ್ರಾಯ ಪಟ್ಟಿದೆ. ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ, ವಿನೀತ್ ಸರಣ್, ಎಂಆರ್ ಶಾ ಮತ್ತು ಅನಿರುದ್ಧ ಬೋಸ್ ಪೀಠದ ಸದಸ್ಯರಾಗಿದ್ದಾರೆ.

ಎಸ್‌ಸಿ/ಎಸ್‌ಟಿ ವರ್ಗದವರಿಗೆ ಹಂಚಿಕೆಯಾಗಿರುವ ಸ್ಥಾನ ಭರ್ತಿ ಮಾಡಿಕೊಳ್ಳಲು ಉಪವರ್ಗೀಕರಣ ನಡೆಸಲು ಸರಕಾರಕ್ಕೆ ಹಕ್ಕು ನೀಡುವ ಕಾನೂನನ್ನು ಪಂಜಾಬ್ ಸರಕಾರ ರೂಪಿಸಿತ್ತು. ಆದರೆ ಇದು ಅಕ್ರಮ ಎಂದು ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್ ಇದನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಪಂಜಾಬ್ ಸರಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಂಜಾಬ್ ಸರಕಾರ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಾಧೀಶ ಎಸ್‌ಎ ಬೋಬ್ಡೆಯವರ ಗಮನಕ್ಕೆ ತಂದಿದೆ. ಜೊತೆಗೆ, ಈ ಪ್ರಕರಣದ ವಿಚಾರಣೆಗೆ ವಿಸ್ತೃತ ಪೀಠ ರಚಿಸುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News