ವಿಜಯ್ ಮಲ್ಯ ನ್ಯಾಯಾಂಗ ನಿಂದನೆ ಪ್ರಕರಣ: ಮರುಪರಿಶೀಲನಾ ಅರ್ಜಿಯ ತೀರ್ಪು ಕಾದಿರಿಸಿದ ಸುಪ್ರೀಂ

Update: 2020-08-27 15:11 GMT

ಹೊಸದಿಲ್ಲಿ, ಆ.27: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನನ್ನು ತಪ್ಪಿತಸ್ತ ಎಂದು ನಿರೂಪಿಸಿದ 2017ರ ಆದೇಶವನ್ನು ಮರುಪರಿಶೀಲಿಸಲು ಕೋರಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ ಎಂದು ವರದಿಯಾಗಿದೆ.

ನ್ಯಾಯಾಲಯದ ಆದೇಶ ಉಲ್ಲಂಘಿಸಿ ತನ್ನ ಮಕ್ಕಳಿಗೆ ಸುಮಾರು 295 ಕೋಟಿ ರೂ. ಹಣವನ್ನು ವರ್ಗಾಯಿಸುವ ಮೂಲಕ ಮಲ್ಯ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು 2017ರ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಯುನೈಟೆಡ್ ಸ್ಪಿರಿಟ್ಸ್ ಲಿ. ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮಲ್ಯಾಗೆ ಈ ಮೊತ್ತವನ್ನು ಬ್ರಿಟನ್‌ನ ‘ಡಿಯಾಗಿಯೊ ಪಿಎಲ್‌ಸಿ’ ಎಂಬ ಮದ್ಯ ಉತ್ಪಾದನಾ ಸಂಸ್ಥೆ ಕೊಟ್ಟಿದೆ. ಮರುಪರಿಶೀಲನೆ ಕೋರಿದ್ದ ಅರ್ಜಿಯನ್ನು 3 ವರ್ಷದವರೆಗೆ ‘ಲಿಸ್ಟಿಂಗ್’ (ನ್ಯಾಯಾಲಯದ ಕಲಾಪದಲ್ಲಿ ಸೇರಿಸುವ ಪ್ರಕ್ರಿಯೆ) ನಡೆಸದಿರುವ ಬಗ್ಗೆ ಸುಪ್ರೀಂಕೋರ್ಟ್‌ನ ನೋಂದಣಿ ವಿಭಾಗವನ್ನು ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಛ ನ್ಯಾಯಾಲಯ, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿತ್ತು. ಮಕ್ಕಳ ಹೆಸರಿಗೆ ವರ್ಗಾಯಿಸಿರುವ 295 ಕೋಟಿ ರೂ. ಮೊತ್ತ ತಾನು ನಿರ್ವಹಿಸುವ ಸಾವಿರಾರು ವಹಿವಾಟುಗಳಲ್ಲಿ ಒಂದಾಗಿದ್ದು, ಇದನ್ನು ತನ್ನ ಆಸ್ತಿಯ ಲೆಕ್ಕಕ್ಕೆ ಪರಿಗಣಿಸಬಾರದು ಎಂಬುದು ವಿಜಯ್ ಮಲ್ಯರ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News