ಹಳೆ ಐಎಂಎಫ್ ಮಾಹಿತಿ ತೋರಿಸಿ ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಬೆನ್ನು ತಟ್ಟಿಕೊಂಡ ಬಿಜೆಪಿ

Update: 2020-08-29 05:59 GMT

ಹೊಸದಿಲ್ಲಿ: ಭಾರತ ಸಹಿತ  ಚೀನಾ, ಅಮೆರಿಕ, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಜಪಾನ್, ಇಂಗ್ಲೆಂಡ್ ಹಾಗೂ ಕೆನಡಾದ ಸಂಭಾವ್ಯ ಜಿಡಿಪಿ ಪ್ರಗತಿ ಪ್ರಮಾಣದ ಕುರಿತಾದ ಮಾಹಿತಿಯಿರುವ ಟ್ವೀಟ್ ಒಂದನ್ನು ಬಿಜೆಪಿ ಆಗಸ್ಟ್ 22ರಂದು ಪೋಸ್ಟ್ ಮಾಡಿತ್ತು. ಐಎಂಎಫ್ ಅಂಕಿ ಅಂಶಗಳನ್ನಾಧರಿಸಿದ ಮಾಹಿತಿ ಇದೆಂದು ಬಿಜೆಪಿ ಹೇಳಿತ್ತು.

"ಕೋವಿಡ್ ನಂತರದ ಸನ್ನಿವೇಶದಲ್ಲಿ ಜಗತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವಂತೆಯೇ ಭಾರತ 2020ರಲ್ಲಿ ಸಕಾರಾತ್ಮಕ ಅಭಿವೃದ್ಧಿಯೊಂದಿಗೆ ಪ್ರಜ್ವಲಿಸುತ್ತಿದೆ. ಜಗತ್ತಿನ ಅತ್ಯಂತ ವೇಗದಿಂದ ಬೆಳೆಯುತ್ತಿರುವ ಆರ್ಥಿಕತೆ ಎಂಬ ಸ್ಥಾನವನ್ನೂ ಅದು ಉಳಿಸಿಕೊಳ್ಳಲಿದೆ,'' ಎಂದು ಬಿಜೆಪಿಯ ಟ್ವೀಟ್ ಹೇಳಿತ್ತು. ಈ ಟ್ವೀಟ್ ಅನ್ನು 2,500ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಬಿಜೆಪಿಯ ದಿಲ್ಲಿ, ನಾಗಾಲ್ಯಾಂಡ್, ಒಡಿಶಾ ಘಟಕಗಳು ಹಾಗೂ ಪಕ್ಷದ ಹಲವು ಸಂಸದರು ಈ ಟ್ವೀಟ್ ಶೇರ್ ಮಾಡಿದ್ದರು.

ಹಾಗಾದರೆ 2020 ವರ್ಷಕ್ಕೆ ಭಾರತದ ಅಭಿವೃದ್ಧಿ ಪ್ರಮಾಣ ಸಕಾರಾತ್ಮಕವಾಗಲಿದೆ ಎಂದು ಐಎಂಎಫ್ ಅಂದಾಜಿಸಿದೆಯೇ? ಐಎಂಎಫ್ ಅಂಕಿಅಂಶಗಳ ಪ್ರಕಾರ ಭಾರತ ಅತ್ಯಂತ ವೇಗದಿಂದ  ಬೆಳೆಯುವ ಆರ್ಥಿಕತೆಯೇ? ಎಂಬ ಪ್ರಶ್ನೆಗಳು ಏಳುತ್ತವೆ. ಇದಕ್ಕೆ ಒಂದೇ ಉತ್ತರ-ಇಲ್ಲ. ಇತ್ತೀಚಿಗಿನ ಹೆಚ್ಚಿನ ಐಎಂಎಫ್ ಅಂದಾಜುಗಳು ಭಾರತದಲ್ಲಿ 2020ರಲ್ಲಿ ಅಭಿವೃದ್ಧಿ ಹಿನ್ನಡೆಯಾಗಲಿದೆಯೆಂದೇ ಹೇಳಿವೆ.

ಬಿಜೆಪಿ ಇತ್ತೀಚೆಗೆ ಮಾಡಿರುವ ಟ್ವೀಟ್‍ನಲ್ಲಿ ಇರುವಂತಹದೇ ಒಂದು ಮಾಹಿತಿಯಿರುವ ಟ್ವೀಟ್ ಅನ್ನು ಎಪ್ರಿಲ್ ತಿಂಗಳಲ್ಲಿ ಮಾಡಿತ್ತು  ಹಾಗೂ ಐಎಂಎಫ್ 2020 ಹಾಗೂ 2021ಗೆ ಅಂದಾಜಿಸಿದ್ದ ಜಿಡಿಪಿ ಪ್ರಮಾಣವನ್ನು ಹೋಲಿಕೆ ಮಾಡಿತ್ತು. ಆಗ ತನ್ನ ಟ್ವೀಟ್ ನಲ್ಲಿ ಬಿಜೆಪಿ ಹೀಗೆ ಹೇಳಿತ್ತು. "ಕೊರೋನ ಸಾಂಕ್ರಾಮಿಕದ ಪರಿಣಾಮವನ್ನು ಎದುರಿಸುವಷ್ಟು ಭಾರತದ ಆರ್ಥಿಕತೆ ಸುದೃಢವಾಗಿದೆ.  ಹೆಚ್ಚಿನ ಪ್ರಮುಖ ಆರ್ಥಿಕತೆಗಳು ತೀವ್ರ ಆರ್ಥಿಕ ಕುಸಿತವನ್ನು ಎದುರು ನೋಡುತ್ತಿದ್ದರೆ ಹಾಗೂ 2020ರಲ್ಲಿ ಅಭಿವೃದ್ಧಿ ಹಿನ್ನಡೆಯಾಗಲಿದ್ದರೆ, ಐಎಂಎಫ್ ಭಾರತಕ್ಕೆ 2020ರಲ್ಲಿ  ಸಕಾರಾತ್ಮಕ ಅಭಿವೃದ್ಧಿ ಪ್ರಮಾಣ ಹಾಗೂ 2021ರಲ್ಲಿ ಶೇ 7.4 ಪ್ರಗತಿ ಪ್ರಮಾಣ ಅಂದಾಜಿಸಿದೆ,'' ಎಂದು ಟ್ವೀಟ್‍ನಲ್ಲಿ ಬರೆಯಲಾಗಿತ್ತು.

ಬಿಜೆಪಿ ಎಪ್ರಿಲ್ ತಿಂಗಳಲ್ಲಿ ಹಾಗೂ ಆಗಸ್ಟ್ ತಿಂಗಳಲ್ಲಿ ಮಾಡಿದ ಎರಡು ಟ್ವೀಟ್‍ಗಳಲ್ಲಿ 2020ಗೆ ಸಂಬಂಧಿಸಿದ ಅಂಕಿಅಂಶ ಒಂದೇ ಆಗಿರುವುದನ್ನು ಗಮನಿಸಬಹುದು.

ಐಎಂಎಫ್  ವರ್ಷವೊಂದರಲ್ಲಿ ಎರಡು ಬಾರಿ- ಎಪ್ರಿಲ್ ಹಾಗೂ ಸೆಪ್ಟೆಂಬರ್/ಅಕ್ಟೋಬರ್‍ ನಲ್ಲಿ  ಜಾಗತಿಕ ಆರ್ಥಿಕ ವರದಿಗಳನ್ನು ಬಿಡುಗಡೆಗೊಳಿಸಿ ನಂತರ ಎರಡು ಅಪ್ಡೇಟ್‍ಗಳನ್ನೂ ಬಿಡುಗಡೆಗೊಳಿಸುತ್ತದೆ. ಬಿಜೆಪಿ ಎಪ್ರಿಲ್ ತಿಂಗಳಲ್ಲಿ ಮಾಡಿದ ಟ್ವೀಟ್‍ನಲ್ಲಿನ ಅಂಕಿಅಂಶಗಳು ಐಎಂಎಫ್ ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ ದತ್ತಾಂಶದ ಆಧಾರದಲ್ಲಿ ನೀಡಲಾಗಿತ್ತು. ಆದರೆ ಆಗಸ್ಟ್ ಟ್ವೀಟ್ ನಲ್ಲಿನ ಮಾಹಿತಿ ಕೂಡ ಅದನ್ನೇ  ಆಧಾರವಾಗಿಟ್ಟುಕೊಂಡಿದೆ. ಎಪ್ರಿಲ್ ತಿಂಗಳಲ್ಲಿ ಐಎಂಎಫ್ ಬಿಡುಗಡೆಗೊಳಿಸಿದ ದತ್ತಾಂಶದಲ್ಲಿ ಭಾರತಕ್ಕೆ 2020 ಹಾಗೂ 2021ರಲ್ಲಿ ಕ್ರಮವಾಗಿ ಶೇ 1.9 ಹಾಗೂ ಶೇ 7.4 ಪ್ರಗತಿ ಪ್ರಮಾಣ ಅಂದಾಜಿಸಿತ್ತು.

ಆದರೆ ಐಎಂಎಫ್ ಜೂನ್ ತಿಂಗಳಲ್ಲಿ ತನ್ನ ಹಿಂದಿನ ವರದಿಗೆ ಅಪ್ಡೇಟ್ ಬಿಡುಗಡೆಗೊಳಿಸಿತ್ತಲ್ಲದೆ ತನ್ನ ಹಿಂದಿನ ಅಂದಾಜಿಗಿಂತಲೂ  ಹಲವಾರು ಆರ್ಥಿಕತೆಗಳು ಇನ್ನೂ ಹೆಚ್ಚಿನ ಆರ್ಥಿಕ ಸಮಸ್ಯೆಗಳನ್ನು ಎದುರಿಸಲಿದೆ ಎಂದು ಹೇಳಿತ್ತು.

ತನ್ನ ಜೂನ್ ತಿಂಗಳ ವರದಿಯಲ್ಲಿ ಎಪ್ರಿಲ್ ತಿಂಗಳಲ್ಲಿ ತಾನು ಮಾಡಿದ ಅಂದಾಜುಗಳನ್ನು ಪರಿಷ್ಕರಿಸಿ ಭಾರತದ ಆರ್ಥಿಕತೆ 2020ರಲ್ಲಿ ಶೇ 4.5ರಷ್ಟು ಸಂಕುಚಿತಗೊಳ್ಳಲಿದೆ ಹಾಗೂ ದೀರ್ಘ ಲಾಕ್ ಡೌನ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ನಿರೀಕ್ಷೆಗಿಂತ ಕಡಿಮೆ  ಆರ್ಥಿಕ ಸುಧಾರಣೆ ಇದಕ್ಕೆ ಕಾರಣವೆಂದು ಐಎಂಎಫ್ ಹೇಳಿತ್ತು. ಆದುದರಿಂದ 2020ರಲ್ಲಿ ಭಾರತದ ಆರ್ಥಿಕತೆ ಪ್ರಕಾಶಮಾನವಾಗಲಿದೆ ಎಂಬ ಬಿಜೆಪಿ ಹೇಳಿಕೆ ಸುಳ್ಳೆಂದು ಸಾಬೀತಾಗಿದೆ.

ಭಾರತ ವಿಶ್ವದ ಅತ್ಯಂತ ವೇಗದಿಂದ ಬೆಳೆಯುವ ಆರ್ಥಿಕತೆ ಎಂಬ ಬಿಜೆಪಿ ಹೇಳಿಕೆಯೂ ಸುಳ್ಳು. ಐಎಂಎಫ್ ಅಂಕಿಅಂಶ ಚೀನಾ ಮತ್ತು ಎಎಸ್‍ಇಎನ್-5 ದೇಶಗಳಿಗೆ ಉತ್ತಮ ಪ್ರಗತಿ ಪ್ರಮಾಣ ಅಂದಾಜಿಸಿದೆ. ಈ ವರ್ಷ ಚೀನಾದ ಪ್ರಗತಿ ಪ್ರಮಾಣ ಶೇ.1ರಷ್ಟಾಗಲಿದೆ ಎಂದು ಐಎಂಎಫ್ ಹೇಳಿದೆ. ಭಾರತದ ಪ್ರಗತಿ ಪ್ರಮಾಣ ಶೇ 4.5ರಷ್ಟು ಸಂಕುಚಿತಗೊಳ್ಳಲಿದೆ ಎಂದು ಹೇಳಿರುವಾಗ ಅದು ಬಿಜೆಪಿ ಹೇಳಿದಂತೆ ಜಗತ್ತಿನ ಅತ್ಯಂತ ವೇಗದಿಂದ ಬೆಳೆಯುವ ಆರ್ಥಿಕತೆ ಹೇಗಾಗಲು ಸಾಧ್ಯ?

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News