ಕೋವಿಡ್-19 ಲಸಿಕೆ : ಭಾರತ-ಬಾಂಗ್ಲಾ ಔಷಧ ಸಂಸ್ಥೆಗಳ ಮಧ್ಯೆ ಒಪ್ಪಂದ

Update: 2020-08-30 18:48 GMT

ಕೋಲ್ಕತಾ, ಆ.30: ಕೊರೋನ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತದ ಸೆರಮ್ ಇಂಡಿಯಾ ಲಿ.(ಎಸ್‌ಐಎಲ್)ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಾಂಗ್ಲಾದೇಶದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ‘ಬೆಕ್ಸಿಮ್ಕಿ’, ತಾನು ಭಾರತದಲ್ಲಿ ಹೂಡಿಕೆ ಮಾಡಲಿರುವ ಮೊತ್ತವು ಲಸಿಕೆ ಖರೀದಿಗೆ ಪಾವತಿಸುವ ಮುಂಗಡ ಹಣ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

ಬೆಕ್ಸಿಮ್ಕಿಗೆ ಲಸಿಕೆ ಪೂರೈಸಲು ಎಸ್‌ಐಎಲ್ ನೀಡುವ ಆದ್ಯತೆಯನ್ನು ಆಧರಿಸಿ ಹೂಡಿಕೆ ಮಾಡಲಾಗುವುದು. ಹೂಡಿಕೆಯು ಆಗಸ್ಟ್ 28ರಂದು ಎರಡು ಸಂಸ್ಥೆಗಳು ಘೋಷಿಸಿದ ಒಪ್ಪಂದದ ಮುಂದುವರಿದ ಭಾಗವಾಗಿದೆ . ಲಸಿಕೆಯನ್ನು ಜಾಗತಿಕವಾಗಿ ನೋಂದಾಯಿಸಿದ ಬಳಿಕ, ಇದನ್ನು ಪ್ರಥಮವಾಗಿ ಬಳಕೆ ಮಾಡುವ ದೇಶಗಳಲ್ಲಿ ಬಾಂಗ್ಲಾ ಕೂಡಾ ಸೇರಿದೆ ಎಂಬುದನ್ನು ನಮಗೆ ಖಾತರಿಪಡಿಸಲಾಗಿದೆ . ಈ ಒಪ್ಪಂದ ಎರಡು ಸಂಸ್ಥೆಗಳ ನಡುವಿನ ಒಪ್ಪಂದವಲ್ಲ, ಎರಡು ದೇಶಗಳ ನಡುವಿನ ಒಪ್ಪಂದವಾಗಿದೆ ಎಂದು ಬೆಕ್ಸಿಮ್ಕಿ ಫಾರ್ಮ ಲಿ. ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.

ಸೆರಮ್ ಸಂಸ್ಥೆ ಈಗ ಆಕ್ಸ್‌ಫರ್ಡ್/ಅಸ್ತ್ರಾಝೆನೆಕ ಲಸಿಕೆಯ ತೃತೀಯ ಹಂತದ ಪರೀಕ್ಷೆ ನಡೆಸುತ್ತಿದೆ. ಇದೇ ಲಸಿಕೆಯ ಪರೀಕ್ಷೆಯು ಬ್ರೆಝಿಲ್, ಅಮೆರಿಕ ಮತ್ತು ಇಂಗ್ಲೆಂಡಿನಲ್ಲೂ ನಡೆಯುತ್ತಿದೆ. ಇಂಗ್ಲೆಂಡಿನಲ್ಲಿ ನಡೆಸಿರುವ ಪರೀಕ್ಷೆಯಲ್ಲಿ ಪ್ರೋತ್ಸಾಹದಾಯಕ ಫಲಿತಾಂಶ ಲಭಿಸಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆ ಪೂರೈಸುವ ನಿಟ್ಟಿನಲ್ಲಿ ಭಾರತದ ಸೆರಮ್ ಸಂಸ್ಥೆ ಈಗಾಗಲೇ ಆಕ್ಸ್‌ಫರ್ಡ್/ಅಸ್ತ್ರಾಝೆನೆಕ ಸಂಸ್ಥೆ ಹಾಗೂ ಗೇಟ್ಸ್ ಫೌಂಡೇಶನ್‌ನೊಂದಿಗೆ ಸಹಭಾಗಿತ್ವ ಹೊಂದಿದೆ. ಬಾಂಗ್ಲಾದೇಶದ ಸರಕಾರ ಮತ್ತು ಸೆರಮ್ ಸಂಸ್ಥೆಯ ನಡುವಿನ ಒಪ್ಪಂದದಲ್ಲಿ ಸೂಚಿಸಿದ ದರದಲ್ಲಿ ಲಸಿಕೆ ಪೂರೈಕೆಯಾಗಲಿದೆ ಎಂದು ಬೆಕ್ಸಿಮ್ಕಿ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News