‘ಟ್ರಂಪ್ ‘ಅಪಾಯಕಾರಿ ಆತ್ಮಪ್ರಶಂಸಿಗ’!’

Update: 2020-09-01 14:25 GMT

ಲಾಸ್ ಏಂಜಲಿಸ್ (ಅಮೆರಿಕ), ಸೆ. 1: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರ ಕಳೆಗಟ್ಟುತ್ತಿರುವಂತೆಯೇ, ಸಾಕ್ಷ್ಯಚಿತ್ರವೊಂದು ಮಾನಸಿಕ ಆರೋಗ್ಯ ಪರಿಣತರ ಹೇಳಿಕೆಗಳ ಆಧಾರದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ‘ಅಪಾಯಕಾರಿ ಆತ್ಮಪ್ರಶಂಸಿಗ’ (ಮ್ಯಾಲಿಗ್ನಂಟ್ ನಾರ್ಸಿಸಿಸ್ಟ್) ಎಂದು ಬಣ್ಣಿಸಿದೆ.

‘ಅನ್‌ಫಿಟ್: ದ ಸೈಕಾಲಜಿ ಆಫ್ ಡೊನಾಲ್ಡ್ ಟ್ರಂಪ್’ ಎಂಬ ಸಾಕ್ಷಚಿತ್ರವು ಆನ್‌ಲೈನ್ ಸ್ಟ್ರೀಮಿಂಗ್ ಚಾನೆಲ್‌ಗಳಲ್ಲಿ ಮಂಗಳವಾರ ಬಿಡುಗಡೆಗೊಂಡಿದೆ. ಆದರೆ, ಈ ಚಿತ್ರವು ರಾಜಕೀಯ ಉದ್ದೇಶವನ್ನು ಹೊಂದಿಲ್ಲ ಎಂದು ಅದರ ನಿರ್ಮಾಪಕರು ಹೇಳಿದ್ದಾರೆ.

ಟ್ರಂಪ್‌ರ ಮಾನಸಿಕ ಸ್ಥಿತಿಯ ಬಗ್ಗೆ ಅಮೆರಿಕದ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವುದು ತಮ್ಮ ವೈದ್ಯಕೀಯ ಕರ್ತವ್ಯವಾಗಿದೆ ಎಂದು ಈ ಸಾಕ್ಷ್ಯಚಿತ್ರದಲ್ಲಿ ಸಂದರ್ಶನ ನೀಡಿರುವ ಮಾನಸಿಕ ವೈದ್ಯರು ಹೇಳುತ್ತಾರೆ.

ಟ್ರಂಪ್ ‘ಅಪಾಯಕಾರಿ ಆತ್ಮಪ್ರಶಂಸೆ’ಯ ನಾಲ್ಕು ಮಹತ್ವದ ಲಕ್ಷಣಗಳನ್ನು ಸ್ಪಷ್ಟವಾಗಿ ತೋರಿಸುತ್ತಿದ್ದಾರೆ ಎಂದು ಮನಃಶಾಸ್ತ್ರಜ್ಞ ಜಾನ್ ಗಾರ್ಟ್‌ನರ್ ಹೇಳುತ್ತಾರೆ. ಅವುಗಳೆಂದರೆ- ಭ್ರಮೆಯಲ್ಲಿರುವುದು (ಪ್ಯಾರನೋಯ), ಆತ್ಮಪ್ರಶಂಸೆ (ನಾರ್ಸಿಸಿಸಮ್), ಸಮಾಜವಿರೋಧಿ ವ್ಯಕ್ತಿತ್ವ (ಆ್ಯಂಟಿಸೋಶಿಯಲ್ ಪರ್ಸನಾಲಿಟಿ ಡಿಸಾರ್ಡರ್) ಮತ್ತು ಬೇರೆಯವರ ನೋವಿನಲ್ಲಿ ಸಂತೋಷ ಕಾಣುವ ಪ್ರವೃತ್ತಿ (ಸ್ಯಾಡಿಸಮ್).

‘ಅಪಾಯಕಾರಿ ಆತ್ಮಪ್ರಶಂಸೆ’ಯು ಅತ್ಯಂತ ವಿನಾಶಕಾರಿ ವ್ಯಕ್ತಿತ್ವ ಮಾದರಿಯಾಗಿದೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.

‘‘ಇಂಥ ವ್ಯಕ್ತಿತ್ವದ ನಾಯಕರು ಇತಿಹಾಸದುದ್ದಕ್ಕೂ ಕಾಣಿಸಿಕೊಂಡಿದ್ದಾರೆ ಹಾಗೂ ಅವರು ಯಾವತ್ತೂ ಅತ್ಯಂತ ವಿನಾಶಕಾರಿಗಳಾಗಿದ್ದರು’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಗಾರ್ಟ್‌ನರ್ ಹೇಳಿದರು.

‘‘ಇತಿಹಾಸದಲ್ಲಿ ಹಿಟ್ಲರ್, ಸ್ಟಾಲಿನ್ ಮತ್ತು ಮುಸೊಲಿನಿ ‘ಅಪಾಯಕಾರಿ ಆತ್ಮಪ್ರಶಂಸಿಗ’ರಾಗಿದ್ದರು’’ ಎಂದರು. ‘‘ತುಂಬಾ ವಿಚಿತ್ರವೆಂದರೆ, ಅಮೆರಿಕದಲ್ಲಿ ನಾವು ಇಂಥ ವ್ಯಕ್ತಿತ್ವದ ನಾಯಕನನ್ನು ನೋಡಿಲ್ಲ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News