×
Ad

Australia | ಬೋಂಡಿ ಬೀಚ್ ನಲ್ಲಿ ಗುಂಡಿನ ದಾಳಿ: ದಾಳಿಕೋರನೆಡೆಗೆ ನುಗ್ಗಿ ಆತನನ್ನು ನಿಶ್ಯಸ್ತ್ರಗೊಳಿಸಿದ ಅಹ್ಮದ್ ಧೈರ್ಯಕ್ಕೆ ಮೆಚ್ಚುಗೆಯ ಸುರಿಮಳೆ

"ಅವರು ನಿಜವಾದ ಹೀರೋ...ಅವರ ಧೈರ್ಯ ಹಲವಾರು ಜೀವಗಳನ್ನು ಉಳಿಸಿದೆ" ಎಂದ ಪ್ರಧಾನಿ ಆಂಥೋನಿ ಅಲ್ಬನೀಸ್

Update: 2025-12-15 00:10 IST

photo: indianexpress/X/@juliamacfarlane

ಸಿಡ್ನಿ, ಡಿ.14: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಯಹೂದಿ ರಜಾದಿನದ ಕಾರ್ಯಕ್ರಮದ ವೇಳೆ ನಡೆದ ಗುಂಡಿನ ದಾಳಿಯಲ್ಲಿ, ಪಕ್ಕದಲ್ಲಿದ್ದ ಸಾಮಾನ್ಯ ನಾಗರಿಕನೊಬ್ಬ ದಾಳಿಕೋರನನ್ನು ಧೈರ್ಯದಿಂದ ಎದುರಿಸಿ ನಿಶ್ಯಸ್ತ್ರಗೊಳಿಸಿರುವ ಘಟನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಆತನ ಸಮಯೋಚಿತ ಕಾರ್ಯಾಚರಣೆಯಿಂದ ಅನೇಕ ಜೀವಗಳು ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ಕಾರ್ ಪಾರ್ಕ್ ಪ್ರದೇಶದಲ್ಲಿ ರೈಫಲ್ ಹಿಡಿದುಕೊಂಡಿದ್ದ ದಾಳಿಕೋರನ ಬಳಿಗೆ ಓಡಿ ಹೋಗುವ ವ್ಯಕ್ತಿಯೊಬ್ಬನು ಕಾಣಿಸಿಕೊಳ್ಳುತ್ತಾನೆ. ಆತ ದಾಳಿಕೋರನನ್ನು ಎದುರಿಸಿ ಬಂದೂಕನ್ನು ಕಸಿದುಕೊಂಡು ಆಯುಧವನ್ನು ಅವನಿಂದ ದೂರ ಸರಿಸುತ್ತಾನೆ. ಬಳಿಕ ಮತ್ತೊಬ್ಬ ಶೂಟರ್ ಇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬಂದೂಕನ್ನು ನೆಲಕ್ಕೆ ಇಟ್ಟು ಸ್ಥಳದಿಂದ ಹಿಂದೆ ಸರಿಯುವುದೂ ದೃಶ್ಯಗಳಲ್ಲಿ ದಾಖಲಾಗಿದೆ.

ಪೊಲೀಸರ ಪ್ರಕಾರ, ಈ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬ ಶಂಕಿತ ದಾಳಿಕೋರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಮೂರನೇ ಬಂದೂಕುಧಾರಿ ಈ ದಾಳಿಯಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಆಸ್ಟ್ರೇಲಿಯಾದ ಮಾಧ್ಯಮ ವರದಿಗಳ ಪ್ರಕಾರ, ದಾಳಿಕೋರನನ್ನು ನಿಶ್ಯಸ್ತ್ರಗೊಳಿಸಿದ ವ್ಯಕ್ತಿಯನ್ನು 43 ವರ್ಷದ ಸಿಡ್ನಿ ನಿವಾಸಿ ಅಹ್ಮದ್ ಅಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಅವರಿಗೆ ಎರಡು ಬಾರಿ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆಯಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆ ವ್ಯಕ್ತಿಯ ಧೈರ್ಯವನ್ನು ಶ್ಲಾಘಿಸಲಾಗಿದೆ. “ಅವರ ಕ್ರಮದಿಂದ ಅನೇಕ ಜೀವಗಳು ಉಳಿದಿವೆ” ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ನ್ಯೂ ಸೌತ್ ವೇಲ್ಸ್ ರಾಜ್ಯದ ಮುಖ್ಯಮಂತ್ರಿ ಕ್ರಿಸ್ ಮಿನ್ಸ್, ಈ ಘಟನೆಯನ್ನು “ನಾನು ಕಂಡ ಅತ್ಯಂತ ನಂಬಲಾಗದ ದೃಶ್ಯ” ಎಂದು ವರ್ಣಿಸಿದ್ದಾರೆ. “ಅವರ ಧೈರ್ಯದಿಂದ ಇಂದು ಅನೇಕರು ಜೀವ ಉಳಿಸಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಕೂಡ ಪ್ರತಿಕ್ರಿಯಿಸಿ, “ಅಪಾಯದತ್ತ ಓಡಿ ಇತರರಿಗೆ ಸಹಾಯ ಮಾಡಿದ ವ್ಯಕ್ತಿ ನಿಜವಾದ ಹೀರೋ. ಅವರ ಧೈರ್ಯ ಹಲವಾರು ಜೀವಗಳನ್ನು ಉಳಿಸಿದೆ” ಎಂದು ತಿಳಿಸಿದ್ದಾರೆ.

ಸೌಜನ್ಯ: Aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News