ನೆಟ್ ಫ್ಲಿಕ್ಸ್ ನ ‘ಬ್ಯಾಡ್ ಬಾಯ್ ಬಿಲಿಯನೇರ್ಸ್' ಬಿಡುಗಡೆಗೆ ತಡೆಯಾಜ್ಞೆ ತಂದ ‘ಸತ್ಯಂ’ ರಾಮಲಿಂಗ ರಾಜು

Update: 2020-09-02 11:26 GMT

ಹೊಸದಿಲ್ಲಿ: ಸತ್ಯಂ ಸಂಸ್ಥೆಯ ಸ್ಥಾಪಕ . ರಾಮಲಿಂಗ ರಾಜು ಅವರು ನೆಟ್‍ ಫ್ಲಿಕ್ಸ್ ‍ನ ಸಾಕ್ಷ್ಯಚಿತ್ರ ಸರಣಿ `ಬ್ಯಾಡ್ ಬಾಯ್ ಬಿಲಿಯನೇರ್ಸ್ : ಇಂಡಿಯಾ' ಇದರ ಬಿಡುಗಡೆಗೆ  ಹೈದರಾಬಾದ್ ಸಿವಿಲ್ ನ್ಯಾಯಾಲಯದಿಂದ ಮಂಗಳವಾರ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಈ ವೆಬ್ ಸರಣಿ ಇಂದು ಬಿಡುಗಡೆಯಾಗಿಲ್ಲ.

ಈ ಸಾಕ್ಷ್ಯಚಿತ್ರದಲ್ಲಿ ತಮ್ಮ ಕುರಿತಾದ ಕಥೆಯೂ ಇರುವುದರಿಂದ ಇದು ತನ್ನ ಖಾಸಗಿತನವನ್ನು ಕಾನೂನುಬಾಹಿರವಾಗಿ ಆಕ್ರಮಿಸಿದೆ ಎಂದು ರಾಮಲಿಂಗ ರಾಜು ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು.

‘ಸತ್ಯಂ’ ಅವ್ಯವಹಾರ ಪ್ರಕರಣದಲ್ಲಿ ದೋಷಿಯೆಂದು ಘೋಷಿತರಾಗಿರುವ ರಾಜು 2015ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಸಾಕ್ಷ್ಯಚಿತ್ರ ಸರಣಿಯು “ಅರ್ಧ ಸತ್ಯಗಳನ್ನು ಹೊಂದಿದ್ದು ನನ್ನ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ತಯಾರಾಗಿದೆ'' ಎಂದು ಅವರು ತಮ್ಮ ಅಪೀಲಿನಲ್ಲಿ ಆರೋಪಿಸಿದ್ದರು. ರಾಜು ಅವರಿಗಿಂತ ಮುನ್ನ ಈ ಸಾಕ್ಷ್ಯಚಿತ್ರದಲ್ಲಿ  ತಮ್ಮ ಕುರಿತಾದ ಮಾಹಿತಿಯೂ ಇರುವುದರಿಂದ ಸಹಾರ ಸಂಸ್ಥೆಯ ಸುಬ್ರತಾ ರಾಯ್ ಹಾಗೂ ಪಿಎನ್‍ಬಿ ಬ್ಯಾಂಕ್ ಹಗರಣದ ಆರೋಪಿ, ವಜ್ರೋದ್ಯಮಿ ಮೆಹುಲ್ ಚೋಕ್ಸಿ ಕೂಡ ನ್ಯಾಯಾಲಯದ ಮೊರೆ ಹೋಗಿದ್ದರು.

ಸರಣಿಯಲ್ಲಿ ರಾಯ್ ಹೆಸರನ್ನು ಉಲ್ಲೇಖಿಸುವುದಕ್ಕೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದ್ದರೆ, ಚಿತ್ರ ಬಿಡುಗಡೆಗೊಳ್ಳುವ ಮುನ್ನ ಅದನ್ನು ವೀಕ್ಷಿಸಲು ಚೋಕ್ಸಿಗೆ ಅನುಮತಿ ನೀಡಬೇಕೆಂದು ನ್ಯಾಯಾಲಯ ನೆಟ್‍ಫ್ಲಿಕ್ಸ್‍ ಗೆ ಸೂಚಿಸಿದೆ.

“ಬ್ಯಾಡ್ ಬಾಯ್ ಬಿಲಿಯನೇರ್ಸ್ ‘ದುರಾಸೆ, ವಂಚನೆ ಹಾಗೂ ಭ್ರಷ್ಟಾಚಾರದಿಂದ'  ಭಾರತದ ಅತ್ಯಂತ ಕುಖ್ಯಾತ ಉದ್ಯಮಿಗಳ ಸಾಮ್ರಾಜ್ಯ ಹೇಗೆ ಕುಸಿಯಿತು” ಎಂಬ ಕುರಿತಾದ ಚಿತ್ರ ಎಂದು ನೆಟ್ ಫ್ಲಿಕ್ಸ್ ವರ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News