ಸರಕಾರಿ ಅಧಿಕಾರಿಗಳ ‘ಕರ್ಮಯೋಗಿ ಯೋಜನೆ’ಗೆ ಸಂಪುಟ ಅನುಮೋದನೆ

Update: 2020-09-02 14:52 GMT

ಹೊಸದಿಲ್ಲಿ, ಸೆ. 2: ಸರಕಾರಿ ಅಧಿಕಾರಿಗಳ ಕೌಶಲ ಅಭಿವೃದ್ಧಿ ಕಾರ್ಯಕ್ರಮ ‘ಕರ್ಮಯೋಗಿ ಯೋಜನೆ’ಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ‘‘ಇದು ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿಯ ಅತಿ ದೊಡ್ಡ ಸುಧಾರಣೆ’’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸಂಪುಟದ ನಿರ್ಧಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾನ ಸಂಪನ್ಮೂಲ ಮಂಡಳಿಯ ಉನ್ನತ ಸ್ಥಾನದ ಅಧ್ಯಕ್ಷತೆಯನ್ನು ಪ್ರಧಾನಿ ಅವರು ವಹಿಸಲಿದ್ದಾರೆ. ಈ ಮಂಡಳಿ ಆಯ್ದ ಕೇಂದ್ರ ಸಚಿವರು, ಮುಖ್ಯಮಂತ್ರಿಗಳನ್ನು ಒಳಗೊಂಡಿರಲಿದೆ. ಅಲ್ಲದೆ ಶ್ರೇಷ್ಠ ಚಿಂತಕರು (ಜನಪ್ರಿಯ ಶಿಕ್ಷಣ ತಜ್ಞರು, ಜಾಗತಿಕ ನಾಯಕರು) ಹಾಗೂ ಸರಕಾರಿ ಅಧಿಕಾರಿಗಳ ಮುಖ್ಯಸ್ಥರನ್ನು ಒಳಗೊಂಡಿರಲಿದೆ. ‘‘ಸರಕಾರಿ ಅಧಿಕಾರಿಗಳು ಹೇಗಿರಬೇಕು ಎಂಬ ಸರಕಾರದ ದೃಷ್ಟಿಕೋನದ ಆಧಾರದಲ್ಲಿ ಈ ಯೋಜನೆ ರೂಪಿಸಲಾಗಿದೆ. ಇಂದಿನ ಸರಕಾರಿ ಅಧಿಕಾರಿಗಳು ವಿಶ್ವದ ಸವಾಲುಗಳನ್ನು ಎದುರಿಸಬೇಕಾಗಿದೆ. ಅಲ್ಲದೆ, ಪ್ರತಿಭೆ, ನಾವಿನ್ಯತೆ, ಸಭ್ಯತೆ, ವೃತ್ತಿಪರತೆ, ಪ್ರಗತಿಪರತೆ, ಸಾಮರ್ಥ್ಯ, ಪಾರದರ್ಶಕತೆ ರಚನಾತ್ಮಕತೆ, ಸೃಜನಾತ್ಮಕತೆ ಇರಬೇಕಾಗುತ್ತದೆ’’ ಎಂದು ಸಿಬಂದಿ ಹಾಗೂ ತರಬೇತಿ ವಿಭಾಗ (ಡಿಒಪಿಟಿ)ದ ಕಾರ್ಯದರ್ಶಿ ಸಿ. ಚಂದ್ರವೌಳಿ ಹೇಳಿದ್ದಾರೆ. ಅವರು ಕೂಡ ಜಾವ್ಡೇಕರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಸರಕಾರಿ ಅಧಿಕಾರಿಗಳು ಹಾಗೂ ಸಂಸ್ಥೆಗಳು ತಮ್ಮ ಸಾಮರ್ಥ್ಯ ವೃದ್ಧಿಸುವಲ್ಲಿ ‘ಕರ್ಮಯೋಗಿ ಯೋಜನೆ’ ಗಮನ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದ್ದಾರೆ. ವಿಭಾಗೀಯ ಆಧಿಕಾರಿಯಿಂದ ಕಾರ್ಯದರ್ಶಿಗಳ ವರೆಗೆ ಎಲ್ಲರಿಗೂ ಈ ಯೋಜನೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News