×
Ad

‘ಬ್ಯಾಡ್ ಬಾಯ್ಸ್ ಬಿಲಿಯನೇರ್ಸ್’ ತಡೆ ಪ್ರಶ್ನಿಸಿ ಪಾಟ್ನಾ ಹೈಕೋರ್ಟ್ ಸಂಪರ್ಕಿಸಲು ನೆಟ್‌ಫ್ಲಿಕ್ಸ್‌ಗೆ ಸುಪ್ರೀಂ ಕೋರ್ಟ್

Update: 2020-09-02 20:30 IST

ಹೊಸದಿಲ್ಲಿ, ಸೆ. 2: ಬಿಹಾರದ ಸ್ಥಳೀಯ ನ್ಯಾಯಾಲಯದ ಆದೇಶದಂತೆ ತನ್ನ ವೆಬ್ ಸರಣಿ ‘ಬ್ಯಾಡ್ ಬಾಯ್ಸ್ ಬಿಲಿಯನೇರ್ಸ್’ ಮೇಲಿನ ಮಧ್ಯಂತರ ತಡೆ ಪ್ರಶ್ನಿಸಿ ಪಾಟ್ನಾ ಉಚ್ಚ ನ್ಯಾಯಾಲಯ ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ನೆಟ್‌ಫ್ಲಿಕ್ಸ್‌ಗೆ ಸೂಚಿಸಿದೆ.

ಈ ವೆಬ್ ಸರಣಿ ತನ್ನ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಆರೋಪಿಸಿ ಸಹರಾದ ಸುಬ್ರತಾ ರಾಯ್ ನ್ಯಾಯಾಲಯದ ಮೆಟ್ಟಿಲು ಏರಿದ ಬಳಿಕ ಇಂದು ಪ್ರಸಾರವಾಗಬೇಕಿದ್ದ ಈ ವೆಬ್‌ಸರಣಿ ಅಡ್ಡಿ ಎದುರಿಸಬೇಕಾಗಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ, ‘‘ಇದು ಸರಿಯಾದ ವೇದಿಕೆ ಅಲ್ಲ. ನೀವು ಇಲ್ಲಿಗೆ ಬರಬಾರದು’’ ಎಂದು ಹೇಳಿದ್ದಾರೆ.

‘‘ಕೆಳ ನ್ಯಾಯಾಲಯದ ಆದೇಶವನ್ನು ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದು ಸರಿಯಾದ ಪ್ರಕ್ರಿಯೆ ಅಲ್ಲ. ಸಾಕ್ಷ್ಯಚಿತ್ರ ಇಂದು ಪ್ರಸಾರವಾಗಬೇಕಿತ್ತು. ಸಹರಾ ಗುಂಪಿನ ಮನವಿಯ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯ ಅದರ ಪ್ರಸಾರಕ್ಕೆ ತಡೆ ನೀಡಿತ್ತು’’ ಎಂದು ಪೀಠ ಪ್ರತಿಪಾದಿಸಿದೆ. ದುರಾಸೆ, ವಂಚನೆ, ಭ್ರಷ್ಟಾಚಾರದ ಮೂಲಕ ಭಾರತದ ಅತಿ ಕುಖ್ಯಾತ ಉದ್ಯಮಿಗಳು ತಮ್ಮ ಸಾಮ್ರಾಜ್ಯವನ್ನು ಹೇಗೆ ಕಟ್ಟಿದರು ಹಾಗೂ ಅಂತಿಮವಾಗಿ ಹೇಗೆ ನಾಶವಾದರು ಎಂಬುದನ್ನು ಈ ತನಿಖಾ ಸಾಕ್ಷಚಿತ್ರ ಶೋಧಿಸುತ್ತದೆ ಎಂದು ‘ಬ್ಯಾಡ್ ಬಾಯ್ಸ್ ಬಿಲಿಯನೇರ್ಸ್’ ಕುರಿತು ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಮಾಹಿತಿ ನೀಡಲಾಗಿದೆ.

 ಈ ನಡುವೆ ‘ಬ್ಯಾಡ್ ಬಾಯ್ಸ್ ಬಿಲಿಯನೇರ್ಸ್’ನ ಟ್ರೈಲರ್ ಅನ್ನು ನೆಟ್‌ಫ್ಲಿಕ್ಸ್ ಹಾಗೂ ಯುಟ್ಯೂಬ್‌ನಿಂದ ತೆಗೆಯಲಾಗಿದೆ. ಈ ಸರಣಿಯ ಪ್ರದರ್ಶನ ಯಾವಾಗ ಆರಂಭವಾಗಲಿದೆ ಎಂಬುದನ್ನು ನೆಟ್‌ಫ್ಲಿಕ್ಸ್ ತಿಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News