ಅಸಂಘಟಿತ ವಲಯದ ಬೆನ್ನು ಮುರಿದ ನೋಟು ನಿಷೇಧದ ಫಲಿತಾಂಶ ಜಿಡಿಪಿ ಯಲ್ಲಿ ಪ್ರಕಟ: ರಾಹುಲ್ ಗಾಂಧಿ

Update: 2020-09-03 14:36 GMT

ಹೊಸದಿಲ್ಲಿ,ಸೆ.3: ಕೇಂದ್ರದ ವಿರುದ್ಧ ತನ್ನ ಟೀಕಾ ಪ್ರಹಾರವನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಜಿಡಿಪಿ ಅಂಕಿಸಂಖ್ಯೆಗಳಲ್ಲಿ ಪ್ರತಿಫಲನಗೊಂಡಿರುವ ಭಾರತದ ಕಳಪೆ ಆರ್ಥಿಕ ಸಾಧನೆಯು ಸರಕಾರದ 2016ರ ನೋಟು ನಿಷೇಧ ನೀತಿಯ ನೇರ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ. ‘2016 ನ.8ರಂದು ಉರುಳಿಸಿದ್ದ ದಾಳ 2020 ಆ.31ರಂದು ಭಯಂಕರ ಫಲಿತಾಂಶವನ್ನು ನೀಡಿದೆ ’ ಎಂದು ಅವರು ಟ್ವೀಟಿಸಿದ್ದಾರೆ.

‘ಅರ್ಥವ್ಯವಸ್ಥಾ ಕಿ ಬಾತ್, ರಾಹುಲ್ ಗಾಂಧಿ ಕೆ ಸಾಥ್’ ಶೀರ್ಷಿಕೆಯ ತನ್ನ ನಾಲ್ಕು ಭಾಗಗಳ ವೀಡಿಯೊ ಸರಣಿಯ ಎರಡನೇ ಕಂತನ್ನು ಗುರುವಾರ ಬಿಡುಗಡೆಗೊಳಿಸಿರುವ ಅವರು, ಜಿಡಿಪಿಯಲ್ಲಿ ಕುಸಿತ ಮತ್ತು ಪರಿಣಾಮವಾಗಿ ಬಡವರ ಬವಣೆ ನೋಟು ನಿಷೇಧದೊಂದಿಗೆ ನೇರ ನಂಟು ಹೊಂದಿದೆ. ಮೋದಿಯವರ ‘ನಗದು ರಹಿತ ’ಭಾರತವು ವಾಸ್ತವದಲ್ಲಿ ‘ಕಾರ್ಮಿಕರು-ರೈತರು-ಸಣ್ಣ ವ್ಯಾಪಾರಿಗಳು ’ಮುಕ್ತ ಭಾರತವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಅಸಂಘಟಿತ ವಲಯದಿಂದ ಹಣವನ್ನು ಕಿತ್ತುಕೊಂಡು ಕಾರ್ಪೊರೇಟ್ ಕ್ಷೇತ್ರದ ಸಾಲಗಳನ್ನು ಮನ್ನಾ ಮಾಡುವುದು ನೋಟು ನಿಷೇಧದ ಹಿಂದಿನ ಗುಪ್ತ ಉದ್ದೇಶವಾಗಿತ್ತು ಎಂದು ಆರೋಪಿಸಿರುವ ರಾಹುಲ್, ‘ಪ್ರಧಾನಿ 2016 ನ.8ರಂದು ರಾತ್ರಿ ಎಂಟು ಗಂಟೆಗೆ ನೋಟು ನಿಷೇಧ ಕ್ರಮವನ್ನು ಪ್ರಕಟಿಸಿದ ಬಳಿಕ ಇಡೀ ದೇಶವೇ ಬ್ಯಾಂಕುಗಳ ಎದುರು ಸರದಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಈ ಕ್ರಮದಿಂದ ಯಾವ ಲಾಭವಾಗಿದೆ? ಕಪ್ಪು ಹಣ ಪತ್ತೆಯಾಗಿದೆಯೇ? ಇಲ್ಲ. ನೋಟು ನಿಷೇಧದಿಂದ ಬಡವರಿಗೆ ಏನು ಸಿಕ್ಕಿದೆ? ಏನೂ ಇಲ್ಲ. ಹೀಗಾಗಿ ಲಾಭ ಮಾಡಿಕೊಂಡವರು ಯಾರು? ಕೈಗಾರಿಕೋದ್ಯಮಿಗಳು ಮಾತ್ರ. ಜನರ ಹಣವನ್ನು ಕೆಲವು ಕೈಗಾರಿಕೋದ್ಯಮಿಗಳ ಸಾಲಗಳನ್ನು ಮನ್ನಾ ಮಾಡಲು ಬಳಸಿಕೊಳ್ಳಲಾಗಿತ್ತು’ ಎಂದು ಹೇಳಿದ್ದಾರೆ.

ಬಡವರು, ರೈತರು ಮತ್ತು ಅಸಂಘಟಿತ ಕ್ಷೇತ್ರದ ಮೇಲಿನ ಈ ದಾಳಿಯ ವಿರುದ್ಧ ಇಡೀ ದೇಶವೇ ಒಂದಾಗಿ ಹೋರಾಡಬೇಕು ಎಂದು ಹೇಳಿರುವ ಅವರು,ತಾನು ನಗದುರಹಿತ ಭಾರತವನ್ನು ಬಯಸುವುದಾಗಿ ಪ್ರಧಾನಿ ಹೇಳಿದ್ದಾರೆ, ಅಂದರೆ ಅಸಂಘಟಿತ ವಲಯದ ಕಥೆ ಮುಗಿಯಿತು ಎಂದೇ ಅರ್ಥ ಎಂದಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಸಂಘಟಿತ ವಲಯವನ್ನು ನಾಶಗೊಳಿಸುವ ಉದ್ದೇಶದಿಂದ ನೋಟು ನಿಷೇಧ,ಜಿಎಸ್‌ಟಿ ಮತ್ತು ಕೊರೋನ ವೈರಸ್ ಲಾಕ್‌ಡೌನ್ ಜಾರಿಗೊಳಿಸಿತ್ತು ಎಂದು ರಾಹುಲ್ ತನ್ನ ವೀಡಿಯೊ ಸರಣಿಯ ಹಿಂದಿನ ಕಂತಿನಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News