ಉತ್ತರಪ್ರದೇಶ: ಕಸ್ಟಡಿಯಲ್ಲಿ ಹಲ್ಲೆ ಖಂಡಿಸಿ ಪ್ರತಿಭಟನೆ

Update: 2020-09-03 15:12 GMT

ಲಕ್ನೋ, ಸೆ. 3: ಉತ್ತರಪ್ರದೇಶದ ಬಲ್ಲಿಯಾದಲ್ಲಿ ಕಸ್ಟಡಿ ದೌರ್ಜನ್ಯದ ಹಿನ್ನೆಲೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸಹಿತ ನಾಲ್ವರು ಪೊಲೀಸರು ಹಾಗೂ ಹಲವು ಗ್ರಾಮ ನಿವಾಸಿಗಳು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡ ಪೊಲೀಸರು ಹಾಗೂ ಇತರರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕುಟುಂಬದ ಇತರ ಸದಸ್ಯರು ಹಾಗೂ ಕೆಲವು ಗ್ರಾಮ ನಿವಾಸಿಗಳೊಂದಿಗಿನ ವಿವಾದದ ಕುರಿತು ವಿಚಾರಣೆ ನಡೆಸಲು ಬಲ್ಲಿಯಾ ಜಿಲ್ಲೆಯ ರಾಸ್ರಾದಲ್ಲಿರುವ ಪೊಲೀಸ್ ಠಾಣೆಗೆ ಭೇಟಿ ನೀಡಲು ಪನ್ನಾ ರಾಜ್‌ಭರ್ (20) ಪೊಲೀಸರು ಬುಧವಾರ ಸೂಚಿಸಿದ್ದರು.

ಪೊಲೀಸ್ ಠಾಣೆಯಲ್ಲಿ ರಾಜ್‌ಭರ್‌ಗೆ ವಿವೇಚನಾರಹಿತವಾಗಿ ಥಳಿಸಲಾಗಿದೆ. ಆನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಪಿಸಿ ರಾಜ್‌ಭರ್ ಕುಟುಂಬ ದೂರು ದಾಖಲಿಸಿದೆ. ದೂರಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್ಸ್‌ಟೆಬಲ್‌ನ ಹೆಸರು ಉಲ್ಲೇಖಿಸಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ ದೊಡ್ಡ ಸಂಖ್ಯೆಯ ಗ್ರಾಮ ನಿವಾಸಿಗಳು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಸೇರಿ ಪ್ರತಿಭಟನೆ ಆರಂಭಿಸಿದ್ದರು. ಚದುರಲು ನಿರಾಕರಿಸಿದ ಅವರು ಪೊಲೀಸರತ್ತ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು, ಕೆಲವು ಮೋಟಾರು ಸೈಕಲ್‌ಗಳನ್ನು ಜಖಂಗೊಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸರು ನೂರಾರು ಗ್ರಾಮ ನಿವಾಸಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದರು. ಈ ಸಂದರ್ಭ ಪೊಲೀಸರು ಹಾಗೂ ಗ್ರಾಮ ನಿವಾಸಿಗಳ ನಡುವೆ ಘರ್ಷಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News