×
Ad

​ಭಾರತದಲ್ಲಿ ಕಡಿಮೆಯಾಗದ ಕೊರೋನ ತೀವ್ರತೆ

Update: 2020-09-04 09:34 IST

ಹೊಸದಿಲ್ಲಿ : ವಿಶ್ವದಲ್ಲಿ ಗರಿಷ್ಠ ಕೊರೋನ ಪ್ರಕರಣಗಳು ವರದಿಯಾದ ಅಗ್ರ 20 ದೇಶಗಳ ಪೈಕಿ ಭಾರತದಲ್ಲಿ ಇನ್ನೂ ಪ್ರಕರಣಗಳ ತೀವ್ರತೆ ಅತ್ಯಧಿಕ ಇರುವುದು ಕಂಡುಬಂದಿದೆ.

ಇತರ ಎಲ್ಲ ದೇಶಗಳಲ್ಲಿ ಗರಿಷ್ಠ ಮೌಲ್ಯ ಭಾರತಕ್ಕಿಂತ ಕಡಿಮೆ ಇರುವುದು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆ್ಯಂಡ್ ಕಂಟ್ರೋಲ್ (ಇಸಿಡಿಸಿ) ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದುವರೆಗೆ ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣ ಹಾಗೂ ಕಳೆದ ಮೂರು ದಿನಗಳ ಸರಾಸರಿ ಪ್ರಕರಣಗಳ ಅನುಪಾತ ಭಾರತದಲ್ಲೇ ಗರಿಷ್ಠ.

ಭಾರತದಲ್ಲಿ ಗರಿಷ್ಠ ಸಂಖ್ಯೆಯ ಅಂದರೆ 83,883 ಪ್ರಕರಣಗಳು ಗುರುವಾರ ದಾಖಲಾಗಿದ್ದವು. ಮೂರು ದಿನಗಳ ಸರಾಸರಿ 77,387 ಆಗಿದ್ದು, ಇದು ಗರಿಷ್ಠ ಸಂಖ್ಯೆಯ ಪ್ರಕರಣಗಳ ಶೇಕಡ 92.3ರಷ್ಟಾಗಿದೆ. ವಿಶ್ವದ ಯಾವುದೇ ದೇಶಗಳಲ್ಲಿ ಈ ಗರಿಷ್ಠ ಮೌಲ್ಯ ಶೇಕಡ 80ನ್ನೂ ದಾಟಿಲ್ಲ. ಪ್ಯಾಲಸ್ತೀನ್, ಇಸ್ರೇಲ್, ಇಂಡೋನೇಷ್ಯಾ, ಜೋರ್ಡಾನ್, ಪರುಗ್ವೆ ಮತ್ತು ಇರಾಕ್ ದೇಶಗಳನ್ನು ಹೊರತುಪಡಿಸಿ ಉಳಿದ ಯಾವ ದೇಶದಲ್ಲೂ ಈ ಪ್ರಮಾಣ ಶೇಕಡ 80ನ್ನು ದಾಟಿಲ್ಲ. ಅತಿಹೆಚ್ಚು ಪ್ರಕರಣಗಳು ದಾಖಲಾದ 20 ದೇಶಗಳ ಪೈಕಿ ಈ ದೇಶಗಳು ಸೇರಿಲ್ಲ.

ಇದುವರೆಗೆ ಐದು ಲಕ್ಷಕ್ಕಿಂತ ಅಧಿಕ ಪ್ರಕರಣಗಳು ವರದಿಯಾದ ಎಲ್ಲ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಪ್ರಮಾಣ ಇಳಿಕೆಯಾಗಿದೆ. ಉದಾಹರಣೆಗೆ ಕಳೆದ ಮೂರು ದಿನಗಳಲ್ಲಿ ಅಮೆರಿಕದಲ್ಲಿ ದಾಖಲಾದ ಪ್ರಕರಣಗಳ ಸರಾಸರಿ, ದೇಶದ ಗರಿಷ್ಠ ಪ್ರಕರಣಗಳ ಶೇಕಡ 50ಕ್ಕಿಂತಲೂ ಕಡಿಮೆ. ಬ್ರೆಝಿಲ್‌ನಲ್ಲಿ ಪ್ರಸ್ತುತ ಮಟ್ಟ ಗರಿಷ್ಠ ಸಂಖ್ಯೆಯ ಪ್ರಕರಣಗಳ ಮೂರನೇ ಎರಡರಷ್ಟಿದೆ.

ಈ ಅಂಕಿ ಅಂಶವನ್ನು ಮತ್ತೊಂದು ಬಗೆಯಲ್ಲಿ ವಿಶ್ಲೇಷಿಸುವುದಾದರೆ ಅಮೆರಿಕದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿ 40 ದಿನ ಕಳೆದಿದೆ. ಬ್ರೆಝಿಲ್ 35 ಹಾಗೂ ರಷ್ಯಾ 47 ದಿನ ಹಿಂದೆ ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ. ಪೆರು ಹಾಗೂ ಕೊಲಂಬಿಯಾದಲ್ಲಿ ಹದಿನೈದು ದಿನ ಹಿಂದೆ ಈ ಪ್ರಮಾಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News