ಜೆಎನ್‌ಯು ಹಾಸ್ಟೆಲ್‌ನಲ್ಲಿ ಹಲ್ಲೆ: ಎಬಿವಿಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ಇಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ತನ್ನ ಕಾರ್ಯಕರ್ತರ ಮೇಲೆ ಎಬಿವಿಪಿ ಸದಸ್ಯರು ಗುರುವಾರ ಬೆಳಗ್ಗೆ ಹಲ್ಲೆ ನಡೆಸಿದ್ದಾರೆ ಎಂದು ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ) ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಎಐಎಸ್‌ಎ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಆರೋಪವನ್ನು ಆಧಾರ ರಹಿತ ಎಂದು ಎಬಿವಿಪಿ ಟೀಕಿಸಿದ್ದು, ಅಂಥ ಯಾವುದೇ ಘಟನೆ ನಡೆದಿದ್ದರೆ, ವಿಶ್ವವಿದ್ಯಾನಿಲಯ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಎಐಎಸ್‌ಎ ಹೇಳಿಕೆ ಪ್ರಕಾರ, ಮುಂಜಾನೆ 1.30ರ ಸುಮಾರಿಗೆ ಎಂಟು ಮಂದಿ ಎಬಿವಿಪಿ ಕಾರ್ಯಕರ್ತರು ಮಹಿ ಮಾಂಡವಿ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ವಿವೇಕ್ ಪಾಂಡೆ ಕೊಠಡಿಗೆ ತೆರಳಿ ಆತನಿಗೆ ಬೆದರಿಕೆ ಹಾಕಿದ್ದಾರೆ. ಈ ಪೈಕಿ ಬಹುತೇಕ ಮಂದಿ ಪಾನಮತ್ತರಾಗಿದ್ದು, ಆಲ್ಕೋಹಾಲ್ ಬಾಟಲಿಗಳನ್ನೂ ಹೊಂದಿದ್ದರು. ಮತ್ತೆ ಆರು ಮಂದಿ ಈ ಗುಂಪಿಗೆ ಸೇರಿಕೊಂಡು ಪಾಂಡೆಯನ್ನು ಹೊಡೆದರು. ಗಾರ್ಡ್ ಮತ್ತು ಜೆಎನ್‌ಯು ಆಡಳಿತದ ಸಿಸಿಟಿವಿ ಕ್ಯಾಮೆರಾಗಳ ಮುಂದೆಯೇ ಅಮಾನುಷವಾಗಿ ಹಲ್ಲೆ ನಡೆಸಿದರು. ಕಬ್ಬಣದ ರಾಡ್‌ನಿಂದ ಕಣ್ಣಿನ ಕೆಳಭಾಗಕ್ಕೆ ಹೊಡೆದಿದ್ದು, ಪಾಂಡೆಯ ಮುಖ, ತಲೆ ಹಾಗೂ ಕೈಗಳಿಗೆ ಗಾಯಗಳಾಗಿವೆ ಎಂದು ಎಐಎಸ್‌ಎ ದೂರು ನೀಡಿದೆ.
ಪಾಂಡೆಯ ನೆರವಿಗಾಗಿ ಆಗಮಿಸಿದ ಕೌನ್ಸಿಲರ್ ಸುಷೇತಾ ತೆಂಡೂಲ್ಕರ್ ಹಾಗೂ ಎಐಎಸ್‌ಎ ಕಾರ್ಯಕರ್ತ ರಜನೀಶ್ ಅವರನ್ನೂ ನಿಂದಿಸಿ, ಹಲ್ಲೆ ಮಾಡಲಾಗಿದೆ ಎಂದು ಎಐಎಸ್‌ಎ ಆಪಾದಿಸಿದೆ. ವಿವಿ ಆರೋಗ್ಯ ಕೇಂದ್ರಕ್ಕೆ ಪಾಂಡೆಯನ್ನು ಕರೆದೊಯ್ಯಲಾಗಿದ್ದು, ಬಳಿಕ ರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪಾಂಡೆ ಮುಖಕ್ಕೆ ಆರು ಹೊಲಿಗೆ ಹಾಕಲಾಗಿದೆ ಎಂದು ವಿವರಿಸಲಾಗಿದೆ.
ಆರೋಪವನ್ನು ಎಬಿವಿಪಿ ನಿರಾಕರಿಸಿದ್ದು, ಈ ಆಧಾರ ರಹಿತ ಆರೋಪದ ಮೂಲಕ ಎಬಿವಿಪಿಗೆ ಮಸಿ ಬಳಿಯುವ ಯತ್ನ ನಡೆಸುತ್ತಿದೆ ಎಂದು ಹೇಳಿದೆ.