ಸುಶಾಂತ್ ಸಿಂಗ್ ಪ್ರಕರಣ : ರಿಯಾ ಚಕ್ರವರ್ತಿ ಮನೆ ಮೇಲೆ ಎನ್‌ಸಿಬಿ ದಾಳಿ
ಹೊಸದಿಲ್ಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನರೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಶುಕ್ರವಾರ ಮುಂಜಾನೆ ನಟಿ ರಿಯಾ ಚಕ್ರವರ್ತಿ ಮನೆ ಮೇಲೆ ದಾಳಿ ನಡೆಸಿದೆ.
ಮುಂಬೈನಲ್ಲಿರುವ ರಿಯಾ ನಿವಾಸದಲ್ಲಿ ಎನ್‌ಸಿಬಿ ತಂಡ ಶೋಧ ಕಾರ್ಯಾಚರಣೆ ಕೈಗೊಂಡಿದೆ ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ. ಸುಶಾಂತ್ ಸಿಂಗ್ ಪ್ರಕರಣದ ಮಾದಕ ವಸ್ತು ಆಯಾಮದಲ್ಲಿ ಎನ್‌ಸಿಬಿ ಈಗಾಗಲೇ ಐದು ಮಂದಿಯನ್ನು ಬಂಧಿಸಿದೆ.
ಅಬ್ದುಲ್ ಬಾಸಿತ್ ಪರಿಹಾರ್‌ನನ್ನು ಮುಂಬೈನ ಬಾಂದ್ರಾ ನಿವಾಸದಿಂದ ಬಂಧಿಸಲಾಗಿದೆ ಎಂದು ಏಜೆನ್ಸಿ ಹೇಳಿದೆ. ಆತ ಸ್ಯಾಮ್ಯುಯೆಲ್ ಮಿರಾಂಡಾ ಜತೆ ಸಂಪರ್ಕ ಹೊಂದಿದ್ದ. ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿಗಾಗಿ ಮಿರಾಂಡ ಮಾದಕ ವಸ್ತು ಖರೀದಿಸುತ್ತಿದ್ದ ಎಂದು ಎನ್‌ಸಿಬಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಮಿರಾಂಡ, ಸುಶಾಂತ್ ಅವರ ಹೌಸ್‌ಕೀಪಿಂಗ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆತನನ್ನು ರಿಯಾ ಚಕ್ರವರ್ತಿ ಕಳೆದ ಮೇ ತಿಂಗಳಲ್ಲಿ ನೇಮಕ ಮಾಡಿದ್ದರು. ಎಲ್ಲ ಗೃಹ ವೆಚ್ಚವನ್ನು ಆತ ನಿರ್ವಹಿಸುತ್ತಿದ್ದ. ಸುಶಾಂತ್ ಹಣವನ್ನು ಬಳಸಿಕೊಂಡು ಮಿರಾಂಡ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಎಂದು ರಜಪೂತ್ ಕುಟುಂಬ ಆಪಾದಿಸಿತ್ತು.