ಉತ್ತರಪ್ರದೇಶ: 3 ವರ್ಷ ಬಾಲಕಿಯ ಅತ್ಯಾಚಾರ,ಹತ್ಯೆ
ಲಕ್ನೊ, ಸೆ.4: ಉತ್ತರಪ್ರದೇಶದ ಲಕ್ಷ್ಮೀಪುರ್ ಖೇರಿಯಲ್ಲಿ ಗುರುವಾರ ಬೆಳಗ್ಗೆ ಮೂರು ವರ್ಷದ ಬಾಲಕಿ ಹೊಲವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲಗೈಯಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಕಳೆದ 20 ದಿನಗಳಲ್ಲಿ ಮೂರನೇ ಬಾರಿ ಅಪ್ರಾಪ್ತಯ ಅತ್ಯಾಚಾರ ಹಾಗೂ ಕೊಲೆ ನಡೆದಿದೆ.
ಬಾಲಕಿಯು ಬುಧವಾರದಿಂದ ಕಾಣೆಯಾಗಿದ್ದಳು. ಬಾಲಕಿಯ ಶವ ಆಕೆಯ ಮನೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಪತ್ತೆಯಾಗಿದೆ. ತೀವ್ರ ಸ್ವರೂಪದ ಗಾಯದೊಂದಿಗೆ ಕಂಡುಬಂದಿದ್ದ ಶವವನ್ನು ನೋಡಿದ್ದ ಪೊಲೀಸರು ಇದೊಂದು ಕೊಲೆ ಎಂದು ನಿನ್ನೆ ಹೇಳಿದ್ದರು. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆ ಪೊಲೀಸ್ ದೂರಿನಲ್ಲಿ ಮತ್ತೊಂದು ಗ್ರಾಮದ ವ್ಯಕ್ತಿಯ ಮೇಲೆ ಆರೋಪ ಹೊರಿಸಿದ್ದು, ಹಳೆಯ ದ್ವೇಷದ ಕಾರಣಕ್ಕೆ ಆತ ನನ್ನ ಮಗಳನ್ನು ಅಪಹರಿಸಿ, ಕೊಂದಿದ್ದಾನೆ ಎಂದು ದೂರಿದ್ದಾನೆ.
ಆರೋಪಿಯನ್ನು ಬಂಧಿಸಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖಸ್ಥ ಸತೇಂದ್ರ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಲಕ್ಷ್ಮೀಪುರ್ ಖೇರ್‌ನಲ್ಲಿ 17ರ ಬಾಲಕಿ ಸ್ಕಾಲರ್‌ಶಿಪ್ ಅರ್ಜಿ ತುಂಬಲು ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಆಕೆಯನ್ನು ಅತ್ಯಾಚಾರ ನಡೆಸಿ,ಕೊಲೆಗೈದಿರುವ ಆಘಾತಕಾರಿ ಘಟನೆ ನಡೆದಿತ್ತು.