ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಪರಿಸ್ಥಿತಿ ಸ್ವಲ್ಪ ಉದ್ವಿಗ್ನ, ಸೇನೆ ನಿಯೋಜನೆ

Update: 2020-09-04 07:26 GMT

ಹೊಸದಿಲ್ಲಿ: ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬಿಗುವಿನಿಂದ ಕೂಡಿದೆ ಎಂದು ಸೇನಾ  ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.

“ನಾವು ನಮ್ಮ ಸುರಕ್ಷತೆಗಾಗಿ ಮುಂಜಾಗರೂಕತಾ ಕ್ರಮವಾಗಿ ಸೇನೆ ನಿಯೋಜನೆ ಮಾಡಿದ್ದೇವೆ. ಈ  ಸಮಸ್ಯೆ ಮಾತುಕತೆಗಳ ಮೂಲಕ ಇತ್ಯರ್ಥಗೊಳ್ಳುವುದೆಂದು ನಾವು ಖಂಡಿತವಾಗಿ ನಂಬಿದ್ದೇವೆ'' ಎಂದು ಅವರು ತಿಳಿಸಿದ್ದಾರೆ.

“ಗುರುವಾರ ಲೇಹ್ ತಲುಪಿದ ನಂತರ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಸೇನಾ ಸಿಬ್ಬಂದಿಯ ಜತೆ ಚರ್ಚಿಸಿದ್ದೇನೆ. ಅವರ ಆತ್ಮಸ್ಥೈರ್ಯ ಅಚಲವಾಗಿದೆ ಹಾಗೂ ಯಾವುದೇ ಪರಿಸ್ಥಿತಿ ಎದುರಿಸಲು ಅವರು ಸನ್ನದ್ಧರಾಗಿದ್ದಾರೆ. ನಮ್ಮ ಸೇನೆಯ ಅಧಿಕಾರಿಗಳು ಜತ್ತಿನಲ್ಲಿಯೇ ಅತ್ಯುತ್ತಮ, ಅವರು ಇಡೀ ದೇಶಕ್ಕೆ ಹೆಮ್ಮೆಯುಂಟು ಮಾಡಿದ್ದಾರೆ'' ಎಂದು ಜನರಲ್ ನರಾವಣೆ ಹೇಳಿದ್ದಾರೆ.

“ಕಳೆದ ಎರಡು ಮೂರು ತಿಂಗಳುಗಳಿಂದ ಚೀನಾ ಜತೆಗಿನ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಲೇ ಇವೆ. ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ಪರಿಹಾರಗೊಂಡು   ನಮ್ಮ ಹಿತಾಸಕ್ತಿಗಳು ರಕ್ಷಿಸಲ್ಪಡುತ್ತವೆ ಎಂಬ ವಿಶ್ವಾಸವಿದೆ'' ಎಂದು ಅವರು ಹೇಳಿದ್ದಾರೆ.

ಕಳೆದ ಶನಿವಾರ ಹಾಗೂ ಸೋಮವಾರ ಚೀನೀ ಸೇನಾ ಪಡೆಗಳು ಪಂಗ್ಯೊಂಗ್ ಸರೋವರದ ಪಶ್ಚಿಮ ದಂಡೆ ಸಮೀಪ ಅತಿಕ್ರಮಣಕ್ಕೆ ಮುಂದಾಗಿದ್ದರೂ ಭಾರತೀಯ ಸೇನೆ ಈ ಯತ್ನವನ್ನು ತಡೆಯಲು ಸಫಲವಾದ ನಂತರದ ಬೆಳವಣಿಗೆಯಲ್ಲಿ ಸೇನಾ ಮುಖ್ಯಸ್ಥ  ಲಡಾಖ್‍ಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News