ನೀಟ್, ಜೆಇಇ ಮುಂದೂಡಲು ನಿರಾಕರಿಸಿದ ಸುಪ್ರೀಂ: ಆರು ರಾಜ್ಯಗಳ ಅಪೀಲು ತಿರಸ್ಕೃತ

Update: 2020-09-04 11:18 GMT

ಹೊಸದಿಲ್ಲಿ: ಕೋವಿಡ್ ಸಮಸ್ಯೆಯನ್ನು ಗಮನದಲ್ಲಿರಿಸಿ ನೀಟ್ ಮತ್ತು ಜೆಇಇ ಪರೀಕ್ಷೆ ಮುಂದೂಡಬೇಕೆಂದು  ಕೋರಿ ವಿಪಕ್ಷ ಆಡಳಿತವಿರುವ ಆರು ರಾಜ್ಯಗಳು ಸಲ್ಲಿಸಿರುವ ಅಪೀಲನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿ ಹಾಕಿದೆ. ದೇಶಾದ್ಯಂತ ಲಕ್ಷಗಟ್ಟಲೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹಿಂದಿನ ಆದೇಶವನ್ನು ಮರುಪರಿಶೀಲಿಸಿ ಪರೀಕ್ಷೆ ಮುಂದೂಡಬೇಕೆಂದು ಆರು ರಾಜ್ಯಗಳು ಕೋರಿದ್ದವು.

 ಅಪೀಲಿನಲ್ಲಿ ಯಾವುದೇ ಅರ್ಹತೆಯಿಲ್ಲ ಎಂದು ಜಸ್ಟಿಸ್ ಅಶೋಕ್ ಭೂಷಣ್, ಜಸ್ಟಿಸ್  ಬಿ ಆರ್  ಗವಾಯಿ ಹಾಗೂ ಜಸ್ಟಿಸ್ ಕೃಷ್ಣ ಮುರಾರಿ ಅವರ ಪೀಠ  ಹೇಳಿದೆಯಲ್ಲದೆ ಹಿಂದಿನ ತೀರ್ಪನ್ನು ಮರುಪರಿಶೀಲಿಸಲು ಯಾವುದೇ ಪ್ರಮುಖ ಕಾರಣವಿಲ್ಲ ಎಂದಿದೆ.

ಈ ಹಿಂದೆ ತನ್ನ ಆಗಸ್ಟ್ 17ರ ತೀರ್ಪಿನಲ್ಲಿ 11 ರಾಜ್ಯಗಳ 11 ವಿದ್ಯಾರ್ಥಿಗಳು ಮಾಡಿದ್ದ ಇಂತಹುದೇ ಅಪೀಲನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಇಂದಿನ ತೀರ್ಪು ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಛತ್ತೀಸಗಢ ಹಾಗೂ ಪುದುಚ್ಚೇರಿ  ಸಲ್ಲಿಸಿದ್ದ ಅಪೀಲಿನ ಮೇಲೆ ವಿಚಾರಣೆ ನಡೆಸಿ ನೀಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿ ಗಮನಿಸಿ ಪರೀಕ್ಷೆ ಮುಂದೂಡುವಂತೆ ಈ ರಾಜ್ಯಗಳು ಕೇಳಿಕೊಂಡಿದ್ದವು.

ಜೆಇಇ ಸೆಪ್ಟೆಂಬರ್ 1ರಂದು ಆರಂಭಗೊಂಡಿದ್ದು ಸೆಪ್ಟೆಂಬರ್ 6ರ  ತನಕ ನಡೆಯಲಿದ್ದರೆ, ನೀಟ್ ಸೆಪ್ಟೆಂಬರ್ 13ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News