‘ಸುರಕ್ಷಿತ’ ರಾಜಸ್ಥಾನಕ್ಕೆ ಕಫೀಲ್ ಖಾನ್ ಕುಟುಂಬ ಸ್ಥಳಾಂತರಗೊಳ್ಳಲು ನೆರವಾದ ಪ್ರಿಯಾಂಕಾ ಗಾಂಧಿ

Update: 2020-09-04 18:10 GMT

ಹೊಸದಿಲ್ಲಿ, ಸೆ.4: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಲಹೆಯಂತೆ ತಾನು ಕುಟುಂಬದ ಸಹಿತ ಉತ್ತರಪ್ರದೇಶದಿಂದ ರಾಜಸ್ತಾನಕ್ಕೆ ವಾಸ್ತವ್ಯ ಬದಲಿಸಿದ್ದು ರಾಜಸ್ತಾನದಲ್ಲಿ ಸುರಕ್ಷಿತರಾಗಿರುತ್ತೇವೆ ಎಂದು ಡಾ. ಕಫೀಲ್‌ಖಾನ್ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಥುರಾ ಜೈಲಿನಲ್ಲಿ ಬಂಧನದಲ್ಲಿದ್ದ ದಿನದಿಂದಲೂ, ಪ್ರಿಯಾಂಕಾ ಸೂಚನೆಯಂತೆ ಕಾಂಗ್ರೆಸ್ ಮುಖಂಡರು ತನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಭರವಸೆ ಮೂಡಿಸಿದ್ದರು. ಸೆ.1ರಂದು ಜೈಲಿನಿಂದ ಬಿಡುಗಡೆಯಾದಾಗ ಮಥುರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಮಾಥುರ್ ಅಲ್ಲಿಗೆ ಆಗಮಿಸಿ ತನ್ನನ್ನು ಸ್ವಾಗತಿಸಿ ರಾಜಸ್ತಾನದ ಗಡಿಭಾಗದವರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಡಿಸೆಂಬರ್‌ನಲ್ಲಿ ಆಲಿಗಢ ಮುಸ್ಲಿಂ ವಿವಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಖಾನ್‌ರನ್ನು ಜನವರಿ 29ರಂದು ಬಂಧಿಸಲಾಗಿತ್ತು. ಕೆಲ ದಿನಗಳ ಬಳಿಕ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪ ದಾಖಲಿಸಲಾಗಿತ್ತು. ಆದರೆ ಖಾನ್ ಅವರ ಬಂಧನ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.

ನಿಸ್ವಾರ್ಥ ರೀತಿಯಲ್ಲಿ ಜನರ ಸೇವೆ ನಡೆಸುತ್ತಿರುವ ಕಫೀಲ್ ಖಾನ್‌ಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದರು. ಖಾನ್ ಬಿಡುಗಡೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ 15 ದಿನದ ಅಭಿಯಾನ ನಡೆಸಿತ್ತು. ಸಹಿ ಅಭಿಯಾನ, ಉಪವಾಸ ಸತ್ಯಾಗ್ರಹ, ದರ್ಗಾಗಳಿಗೆ ಭೇಟಿ, ಖಾನ್ ಹೆಸರಿನಲ್ಲಿ ರಕ್ತದಾನ ಶಿಬಿರ ಇದರಲ್ಲಿ ಸೇರಿದೆ.

ಜೈಪುರದ ಹೋಟೆಲ್‌ನಲ್ಲಿ ಖಾನ್ ಹಾಗೂ ಅವರ ಕುಟುಂಬ ವಾಸ್ತವ್ಯ ಹೂಡಿದೆ. ಖಾನ್ ಬಯಸಿದಷ್ಟು ದಿನ ಇಲ್ಲಿ ಇರಬಹುದು. ಅವರ ವಾಸ್ತವ್ಯದ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ. ಉತ್ತರಪ್ರದೇಶದಲ್ಲಿ ಅವರಿಗೆ ಭದ್ರತೆಯಿಲ್ಲ ಎಂಬುದು ನಮಗೆ ತಿಳಿಸಿದೆ. ಕುಟುಂಬದೊಂದಿಗೆ ಕೆಲ ಸಮಯ ಕಳೆಯಲು ಖಾನ್‌ಗೆ ಅವಕಾಶ ಮಾಡಿಕೊಡಬೇಕಾಗಿದೆ . ಖಾನ್ ಕುಟುಂಬದೊಂದಿಗೆ ಪ್ರಿಯಾಂಕಾ ಗಾಂಧಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಉತ್ತರಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾನವಾಝ್ ಆಲಂ ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.

ಉತ್ತರಪ್ರದೇಶ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಪೂರೈಕೆಯಾಗದೆ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದಾಗ ಡಾ ಕಫೀಲ್ ಖಾನ್ ತಮ್ಮ ಸ್ವಂತ ಹಣದಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಿ ಮಕ್ಕಳ ಪ್ರಾಣ ರಕ್ಷಣೆಗೆ ಶ್ರಮಿಸಿದ್ದರು. ಆದರೆ ಈ ಪ್ರಕರಣಕ್ಕೆ ಕಫೀಲ್ ಖಾನ್ ಅವರ ಕರ್ತವ್ಯಲೋಪ ಕಾರಣ ಎಂದು ಆರೋಪಿಸಿದ ಉತ್ತರ ಪ್ರದೇಶ ಸರಕಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತ್ತು. ಆದರೆ ತನಿಖಾ ಆಯೋಗ ಖಾನ್‌ರನ್ನು ದೋಷಮುಕ್ತಗೊಳಿಸಿತ್ತು.

ಇದೀಗ ತನ್ನನ್ನು ವೈದ್ಯಕೀಯ ಸೇವೆಗೆ ಮರು ನಿಯೋಜಿಸಬೇಕೆಂದು ಕೋರಿ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಪತ್ರ ಬರೆಯುತ್ತೇನೆ. ಸರಕಾರ ಒಪ್ಪದಿದ್ದರೆ ಅಸ್ಸಾಂನ ನೆರೆ ಸಂತ್ರಸ್ತ ಪ್ರದೇಶದಲ್ಲಿ ರಕ್ತದಾನ ಶಿಬಿರ ಸಂಯೋಜಿಸಿ ಸಮಾಜ ಸೇವೆಯಲ್ಲಿ ಮುಂದುವರಿಯುತ್ತೇನೆ ಎಂದು ಡಾ ಕಫೀಲ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News