ಗೆಳೆತನಕ್ಕಾಗಿ ಮಿಡಿಯುವ ದೀಪವೊಂದು ಕೊನೆಯವರೆಗೂ ಉರಿಯುತ್ತಿತ್ತು

Update: 2020-09-04 18:45 GMT

ಎಂ. ಎಸ್. ಆಶಾದೇವಿ

ಅವಳನ್ನು, ಅವಳು ಹಿಡಿದ ದಾರಿ ಕಾನೂನಿಗೆ ವಿರುದ್ಧ ಎನ್ನುವವರ ಮಾತನ್ನು ಗ್ರಹೀತದಲ್ಲಿಟ್ಟುಕೊಂಡೇ ನಾನು ಯಾವಾಗಲೂ ಯೋಚಿಸುವ ಅಂಶವೆಂದರೆ, ಕರ್ನಾಟಕದ ಮೂಲೆ ಮೂಲೆಗಳಿಂದ ಜನ ಅವಳನ್ನು ಕಡೆಯ ಬಾರಿಗೆ ನೋಡಲು ಲಾರಿ, ಬಸ್ಸು, ರೈಲುಗಳಲ್ಲಿ, ತಾವೇ ವಾಹನ ಮಾಡಿಕೊಂಡು ಧಾವಿಸಿದರಲ್ಲ. ಅದನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು? ಈ ಪ್ರೀತಿ, ಈ ಅಭಿಮಾನದ ಮೂಲ ಯಾವುದು? 

ಅವಳು ಅವರನ್ನು ತಲುಪಿದ್ದಳು ಎಂದೇ ಅರ್ಥ. ಹಾಗಿದ್ದರೆ ಇದಕ್ಕಿಂತ ಸಾರ್ಥಕ ಬದುಕು ಯಾವುದು? ನಮ್ಮಿಬ್ಬರ ಮೊದಲ ಭೇಟಿ ಹೆಗ್ಗೋಡಿನಲ್ಲಿ. ಲೋಕಾಭಿರಾಮದ ಪರಿಚಯವಾಗಿ ಬಿಡಬಹುದಾದದ್ದು ಸಖ್ಯವಾಗಿ ಫಲಿಸಿದ್ದು ನಾವಿಬ್ಬರೂ ಒಂದೇ ರೂಮಿನಲ್ಲಿ ಇದ್ದುದ್ದರಿಂದ. ಸಾಹಿತ್ಯದ ಪಾರಮ್ಯದ ಎದುರಿಗೆ ಮಿಕ್ಕದ್ದೆಲ್ಲ ನಗಣ್ಯ ಎಂದು ನಾನು ಗಾಢವಾಗಿ ನಂಬಿದ ಘಟ್ಟ ಅದು. ಈಗಲೂ ಅದು ಬದಲಾಗಿದೆಯೆಂದಲ್ಲ, ಬದಲಿಗೆ ಸಾಹಿತ್ಯದ ಶಕ್ತಿಯನ್ನು ಕುರಿತ ನನ್ನ ನಂಬಿಕೆ ಇನ್ನೂ ಗಾಢವಾಗಿದೆ. ಆದರೆ, ಸಾಹಿತ್ಯದ, ಬರಹಗಾರರ ಪಾತ್ರದ ಬಗೆಗಿನ ನನ್ನ ನಿಲುವು ಬದಲಾಗಿದೆ. ಕೆಲವರನ್ನು ಬರಹಗಾರರೆಂದಿರಲಿ, ಹುಲು ಮಾನವರೆಂದು ಒಪ್ಪಲೂ ಸಾಧ್ಯವಾಗದಷ್ಟು ಮನಸ್ಸಿಗೆ ಕಸಿವಿಸಿಯಾಗಿದೆ, ಅಸಹ್ಯವಾಗಿದೆ. ಗೌರಿ ಮತ್ತೆ ಮತ್ತೆ ನೆನಪಾಗುತ್ತಲೇ ಇದ್ದಾಳೆ. ತನ್ನ ಮಿತಿಗಳನ್ನು ಮಿತಿಗಳೆಂದು ಒಪ್ಪಲೂ ಎಂದೂ ಹಿಂಜರಿಯದ, ತನ್ನ ಆಪ್ತವಲಯದಲ್ಲಿ ತನ್ನ ಬಗೆಗಿನ ಆಕ್ಷೇಪಗಳನ್ನು ಸಹನೆಯಿಂದ ಕೇಳಿಸಿಕೊಳ್ಳಬಹುದಾದ, ಆತ್ಮವಂಚನೆಯಿಲ್ಲದೆ ತನ್ನನ್ನು ತೆರೆದುಕೊಳ್ಳಬಹುದಾದ ಗೌರಿ ನಮ್ಮ ನಡುವಿನ ವೇಷಧಾರಿಗಳ ಎದುರಿನಲ್ಲಿ ಇನ್ನೂ ಎತ್ತರದವಳಾಗಿ ಕಾಣಿಸುತ್ತಿದ್ದಾಳೆ.

ಗೌರಿಯ ಬದುಕಿನಲ್ಲಿ ಘಟಿಸಿದ ಅನೇಕ ತಿರುವುಗಳು, ಅವುಗಳ ವಿಲಕ್ಷಣತೆ, ವಿರೋಧಾಭಾಸಗಳ ನಡುವೆಯೂ ಅವಳಲ್ಲಿ ಅಂತಃಕರಣದ, ಗೆಳೆತನಕ್ಕಾಗಿ ಮಿಡಿಯುವ ದೀಪವೊಂದು ಕೊನೆಯವರೆಗೂ ಉರಿಯುತ್ತಿತ್ತು. ನನ್ನ ಮಟ್ಟಿಗೆ ಗೌರಿಯೆಂದರೆ, ಅಪ್ಪಟ ಗೆಳತಿ. ಅಲ್ಲಿ ಸುಳ್ಳು ತಟವಟಗಳಿಲ್ಲ, ಬಣ್ಣ ಬಡಿವಾರವಿಲ್ಲ, ಸಂಕೋಚವಿಲ್ಲ. ಬದುಕಿನ ಬಿಕ್ಕಟ್ಟು, ಸಂತೋಷಗಳ ಬಗೆಗೆ ಮುಕ್ತವಾಗಿ ಮಾತನಾಡಿಕೊಳ್ಳಬಹು ದಾಗಿತ್ತು. ಒಬ್ಬರನ್ನೊಬ್ಬರು ಬೈದಾಡಿಕೊಂಡು, ಮರುದಿನ ಯಥಾಪ್ರಕಾರ ಕಾಫಿ ಕುಡಿದ್ಯಾ ಅಂತ ಮನಃಕಷಾಯವಿಲ್ಲದೆ ಮಾತು ಮುಂದುವರಿಸಬಹುದಾಗಿತ್ತು. ‘‘ನೀನೊಂದು ಗೂಬೆ ಕಣೆ, ಜೀವನದಲ್ಲಿ ಎಷ್ಟೊಂದನ್ನು ಅನುಭವಿಸದೇ ಹಾಗೆ ಬಿಟ್ಟುಕೊಟ್ಟುಬಿಟ್ಟಿದೀಯಾ’’ ಅಂತ ಅವಳು ನೂರು ಬಾರಿ ನನ್ನನ್ನು ಚುಡಾಯಿಸುತ್ತಿದ್ದಳು, ನಾನೇ ಎಳ್ಕೊಂಡು ಹೋಗಿ ಟೆಸ್ಟ್ ಮಾಡಿಸ್ತೀನಿ, ನಿನ್ನ ಕೊಲೆಸ್ಟ್ರಾಲ್, ಮತ್ತೊಂದು ಅಂತ ಅದೆಷ್ಟು ಬಾರಿ ಕೂಗಾಡಿದ್ದೇನೋ ಗೊತ್ತಿಲ್ಲ. ಅವಳ ಆಫೀಸಿಗೆ ಹೋದಾಗಲೆಲ್ಲ ಮೂಲೆಯಲ್ಲಿಟ್ಟಿದ್ದ ಶೂ ತೋರಿಸಿ ಹೇಳ್ತಾ ಇದ್ದಳು, ‘‘ನೋಡಿ ಮೇಡಂ, ವಾಕ್‌ಗೆ ಅಂತ ಇಟ್ಕೊಂಡಿರೋದು.’’ ನಾ ಹೇಳುತ್ತಿದ್ದೆ, ‘‘ಅದರ ಮೇಲಿರೋ ಧೂಳು ನೋಡಿದ್ರೆ ಗೊತ್ತಾಗುತ್ತೆ, ವಾಕ್ ಹ್ಯಾಗೆ ನಡೀತಾ ಇದೆ ಅಂತ.’’ ಅಕ್ಕಿ ತಾಲಿಪಿಟ್ಟು ಬೆಣ್ಣೆ, ಚಟ್ನಿ ಅಂದರೆ ಪ್ರಾಣ ಅವಳಿಗೆ. ಈಗಲೂ ಮನೇಲಿ ಮಾಡಿದಾಗಲೆಲ್ಲ ಅವಳ ನೆನಪಾಗುತ್ತದೆ. ಅವಳನ್ನು ಒಮ್ಮೆ ಅಮ್ಮನ ಮನೆಗೆ ಊಟಕ್ಕೆ ಕರೆದಿದ್ದೆ, ಅವಳಿಗೆ ಪ್ರಿಯವಾದ ಹೋಳಿಗೆ ಮಾಡಿತ್ತು. ಮಾತಿನ ಭರದಲ್ಲಿ ನಾನು ಹೋಳಿಗೆ ಬಡಿಸುವುದನ್ನೇ ಮರೆತಿದ್ದೆ. ‘‘ಅಯ್ಯೋ ತಾಯಿ, ರಾಶಿ ಕೆಲಸ ಬಿಟ್ಟು ಬಂದಿದ್ದೇ ಹೋಳಿಗೆ ತಿನ್ನೋಕೆ ಅಂತ, ಮೊದಲು ಅದನ್ನು ಬಡಿಸು’’ ಅಂದದ್ದು ನೆನಪಾದಾಗಲೆಲ್ಲ ಕಣ್ಣಾಲಿಗಳು ತುಂಬುತ್ತವೆ. ಕೋಳಿಯ ಹಾಗೆ ಅವಳ ಊಟ, ತಿನ್ನುವುದೇ ಒಂದು ಚೂರು. ನನ್ನ ಕಾಫಿಯ ಹುಚ್ಚಿನ ಬಗ್ಗೆಯಂತೂ ಲೋಕದಲ್ಲೆಲ್ಲ ಅಪ ಪ್ರಚಾರ ಅವಳದು! ಒಮ್ಮೆ ಬಳ್ಳಾರಿಯಲ್ಲಿ ಯಾವುದೋ ವಿಚಾರ ಸಂಕಿರಣ ಆದ ಮೇಲೆ, ನನ್ನನ್ನು ಸ್ಟೇಷನ್‌ಗೆ ಬಿಡಲು ಬಂದಿದ್ದಳು ಗೌರಿ. ಕಾಫಿ ಅಂತ ನಾನು ಪರದಾಡೋದು ನೋಡಿ ತಾನೇ ಹೋಗಿ ತಂದುಕೊಟ್ಟು, ‘‘ಕುಡಿ, ಈ ಗಬ್ಬು ಕಾಫಿ ಕುಡಿದು ಹೊಟ್ಟೆ ಕೆಡದಿದ್ರೆ ನೋಡು’’ ಅಂತ ರೇಗಿಸಿದ್ದಳು. ‘‘ನೋಡೋಕೆ ಶಿಸ್ತಿನ ಗೌರಮ್ಮ, ಕಾಫಿ ಮಾತ್ರ ಎಲ್ಲೀದಾದ್ರೂ ಪರವಾಗಿಲ್ಲ’’ ಅಂತ ಎಲ್ಲರ ಮುಂದೆಯೂ ಗೇಲಿ ಮಾಡ್ತಾ ಇದ್ದಳು. ನೆನಪುಗಳಿಗೆಲ್ಲಿ ಕೊನೆ?

ಸಾರ್ವಜನಿಕ, ಹೋರಾಟದ ಬದುಕು ಅವಳ ಆಯ್ಕೆಯಾಗಿರಲಿಲ್ಲ ಎಂದು ನಾನು ಈಗಲೂ ನಂಬಿದ್ದೇನೆ. ಬದುಕಿನ ಅನಿವಾರ್ಯ ಘಟ್ಟದಲ್ಲಿ ಅವಳು ಆ ಹಂತಕ್ಕೆ ಬಂದುಬಿಟ್ಟಿದ್ದಳು. ಹಿಂದೆ ಹೋಗಲಾಗದ ಘಟ್ಟಕ್ಕೆ ಅವಳು ಬಂದು ಬಿಟ್ಟಿದ್ದಳು. ಆದರೆ, ಅದು ತನ್ನ ಅಂತಿಮ ದಾರಿ ಎಂದಾದ ಮೇಲೆ, ಅವಳು ಎಲ್ಲದಕ್ಕೂ ಸಿದ್ಧವಾಗಿ, ಇಡಿಯಾಗಿ ತನ್ನನ್ನು ಅದಕ್ಕೆ ಅರ್ಪಿಸಿಕೊಂಡಳು, ಸಂತೋಷವಾಗಿ ಮತ್ತು ಸ್ವಇಚ್ಛೆಯಿಂದ. ಕೊನೆ ಕೊನೆಗೆ ಅವಳಿಗೆ ಇದು ತನ್ನ ಬದುಕಿನಲ್ಲಿ ತಾನೇ ಆರಿಸಿಕೊಂಡಿದ್ದರೂ ಇದಕ್ಕಿಂತ ಒಳ್ಳೆಯ ದಾರಿ ಸಿಗುತ್ತಿರಲಿಲ್ಲ ಎನ್ನಿಸಿದ್ದೂ ಇದೆ.. ಈ ಕಾಲದ ಬಿಕ್ಕಟ್ಟುಗಳನ್ನು ಎದುರಿಸಲು ಪತ್ರಕರ್ತರು ಅನಿವಾರ್ಯವಾಗಿ ಹೋರಾಟಗಾರರೂ ಆಗಬೇಕು ಎನ್ನುವುದನ್ನು, ಅವಳ ಸಮಾನ ಮನಸ್ಕ ಪತ್ರಕರ್ತ ಗೆಳೆಯ ಗೆಳತಿಯರೂ ಒಪ್ಪಿಕೊಂಡದ್ದರಿಂದಲೇ ನಿಧಾನವಾಗಿ ಅದೊಂದು ಆಂದೋಲನವಾಗಿ ರೂಪು ಗೊಳ್ಳುತ್ತಿತ್ತು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಕಾವಲುಗಾರಿಕೆಯ ಸ್ಥಾನವನ್ನು, ಪಾತ್ರವನ್ನು ನೆನಪಿಸಿಕೊಳ್ಳುವಂತೆ ಅವಳು ತನ್ನನ್ನೇ ನಿಧಾನವಾಗಿ ಪರಿವರ್ತಿಸಿಕೊಂಡಳು. ನಾನು ಇನ್ನೆಲ್ಲೋ ಬರೆದಂತೆ, ಲಂಕೇಶ್ ತಾತ್ವಿಕವಾಗಿ ಹೇಳಿದ್ದನ್ನು ಪ್ರಯೋಗಿಸಲು ಹೊರಟ ನಮ್ಮ ಕಾಲದ ದಿಟ್ಟೆ ಗೌರಿ. ಲಂಕೇಶ್ ತೀರಿಕೊಂಡಾಗ, ಕೌಟುಂಬಿಕ, ಭಾವುಕ ನೆಲೆಯಲ್ಲಿ ಪತ್ರಿಕೆಯನ್ನು ವಹಿಸಿಕೊಂಡ ಗೌರಿಗೆ ಆ ಘಟ್ಟದಲ್ಲಿ ಬೌದ್ಧಿಕವಾದ, ಸಾಮುದಾಯಿಕವಾದ ತಾತ್ವಿಕ ಸ್ಪಷ್ಟತೆಗಳು ಇರಲಿಲ್ಲ, ಬಹುಷಃ ಆತ್ಮವಿಶ್ವಾಸವೂ ಇರಲಿಲ್ಲ, ಆ ಕಾರಣಕ್ಕಾಗಿಯೇ, ಪತ್ರಿಕೆಯೊಂದಿಗೆ ತಮ್ಮನ್ನು ಜೋಡಿಸಿಕೊಂಡವರನ್ನೂ ಅವಳು ಕೈಬಿಟ್ಟಳು. ಅದೊಂದು ಹಿನ್ನಡೆ ಮತ್ತು ತಪ್ಪುಹೆಜ್ಜೆ ಎಂದು ನನಗನ್ನಿಸಿದ್ದನ್ನು ಹೇಳುತ್ತಲೇ ಇದ್ದೆ ಅವಳಿಗೆ. ‘‘ನಿನಗೆ ಲಿಟರರಿ ಪಾಲಿಟಿಕ್ಸೇ ಗೊತ್ತಾಗಲ್ಲ. ಇದಂತೂ ಗೊತ್ತಾಗಲ್ಲ ಬಿಡು’’ ಎನ್ನುತ್ತಿದ್ದಳು. ‘‘ಏ ಇಲ್ಲಿ ಕೇಳು, ಸಾಹಿತ್ಯದ ವಿದ್ಯಾರ್ಥಿಗಳಿಗೆ ಗೊತ್ತಾಗುವ ಸೂಕ್ಷ್ಮ ಮತ್ಯಾರಿಗೂ ಗೊತ್ತಾಗೋಕೇ ಸಾಧ್ಯ ಇಲ್ಲ’’ ಅನ್ನುವ ಮಾತನ್ನಂತೂ ಆಕೆ ಒಪ್ಪುತ್ತಿದ್ದಳು.

ಆಕೆ ಗೈಡ್ ಪತ್ರಿಕೆ ಮಾಡುತ್ತಿದ್ದ ಸಂದರ್ಭಗಳಲ್ಲಿ ಅನೇಕ ಬಾರಿ ನನ್ನನ್ನು ಕೇಳುತ್ತಿದ್ದುದುಂಟು. ಇದು ಉಪಯೋಗ ಆಗುತ್ತೆ, ಆದರೂ ನಿನಗೆ ಕೆಲಸ ಹೆಚ್ಚಾಗುತ್ತಲ್ವಾ ಅಂದರೆ, ನಾಲ್ಕು ಕಾಸು ಹುಟ್ಟಿ ಜೀವನ ನಡೆಯೋದೇ ಅದರಿಂದ ಅನ್ನುವ ಮಾತು ಕೇಳಲು ನಿಜಕ್ಕೂ ಸಂಕಟವಾಗುತ್ತಿತ್ತು ನನಗೆ.ಅಂತ ಪ್ರಶ್ನೆಗಳನ್ನು ರಾತ್ರಿ ನನಗೆ ಕಳಿಸಿರುತ್ತಿದ್ದಳು ‘ಸ್ಲೀಪಿಂಗ್ ಬ್ಯೂಟಿ’ ಎನ್ನುವ ವಿಶೇಷಣದೊಂದಿಗೆ. ಆಕೆ ತನ್ನ ಆಫೀಸಿನವರ ಜೊತೆ ನಡೆದುಕೊಳ್ಳುತ್ತಿದ್ದುದು ತಾಯಿ ಹೃದಯದಿಂದಲೇ ಹೊರತು ಮಾಲಕಳೆಂದಲ್ಲ. ಅವರ ಜೊತೆಯಲ್ಲೇ ಕೂತು ಅಮ್ಮ ಕಳಿಸಿದ ಸಾರು, ಅಲ್ಲೇ ಮಾಡಿದ ಅನ್ನ, ಮಾತ್ಯಾರೋ ಕೊಟ್ಟ ಉಪ್ಪಿನಕಾಯಿ, ಚಟ್ನಿಪುಡಿಕಾಕ್ರಾ, ಚಪಾತಿ, ರೊಟ್ಟಿ..ಅವಳು ಹಾಗೆ ಎಲ್ಲರೊಳಗೊಂದಾಗಿ ಬಿಟ್ಟಿದ್ದಳು. ಇದನ್ನು ನೋಡಿದಾಗಲೆಲ್ಲ ನನಗೆ ಕೆಲವೊಮ್ಮೆ ಹೆಮ್ಮೆ, ಕೆಲವೊಮ್ಮೆ ದುಃಖ. ದುಃಖವಾಗುತ್ತಿದ್ದುದು ನನ್ನ ಮಿತಿಯೇ ಇರಬಹುದು. ತನ್ನ ಗೆಳೆಯ ಗೆಳತಿಯರ ಬಗೆಗೆ ಅವಳಿಗೆ ಶಂಕೆಯಿಲ್ಲದ ನಂಬಿಕೆ. ಸ್ನೇಹಿತರೊಬ್ಬರಿಗೆ ಒಮ್ಮೆ ತೊಂದರೆಯಾದಾಗ ಅವರನ್ನು ಗೌರಿಯ ಬಳಿ ಕರೆದುಕೊಂಡು ಹೋಗಿದ್ದೆ. ಅವಳು, ಅವರಿಗೆ ಅಲ್ಲೇ ಕೂತು ಎಲ್ಲವನ್ನೂ ಬರೆದುಕೊಡ ಹೇಳಿದಳು, ರಾಜುವನ್ನು ಕರೆದು, ಅದಕ್ಕೆ ಆ ಸಂಚಿಕೆಯಲ್ಲೇ ಜಾಗ ಮಾಡಿ ಅಂತ ಹೇಳಿ ಆ ವಾರದ ಸಂಚಿಕೆಯಲ್ಲೇ ಅದು ಬಂತು. ‘‘ಅಲ್ಲ ಕಣೇ ಮಾರಾಯ್ತಿ, ನೀನು ಹಾಕೇ ಬಿಟ್ಯಲ್ಲ, ಕ್ರಾಸ್ ಚೆಕ್ ಮಾಡಬೇಕು ತಾನೆ’’ ಅಂತ ರೇಗಿಸಿದರೆ, ‘‘ಕರ್ಕೊಂಡು ಬಂದಿದ್ದು ಯಾರು?’’ ಅಂತ, ನೈತಿಕ ಪ್ರಶ್ನೆಯನ್ನು ನನಗೇ ಹಿಂದಿರುಗಿಸಿದಳು. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಯ ವಿಷಯದಲ್ಲಿ ಗಲಾಟೆಯಾದಾಗಲೂ ಆಕೆ ಸಂಪೂರ್ಣ ಹೊಣೆಗಾರಿಕೆಯನ್ನು ನನಗೇ ಬಿಟ್ಟಿದ್ದಳು, ಯಾರ ಕೈಲಿ ಬರೆಸಬೇಕು ನೀನೇ ನಿರ್ಧಾರ ಮಾಡಿ ಬರೆಸು ಅಂತ ಹೇಳಿ, ಆ ಇಡೀ ಸಂಚಿಕೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತಂತೆ ರೂಪಿಸಿದಳು. ನಿಜ, ಕೊನೆ ಕೊನೆಯ ಪತ್ರಿಕೆಯ ಸ್ವರೂಪದ ಬಗ್ಗೆ ನನಗೆ ಅಸಮಾಧಾನವಿತ್ತು. ಭಾಷೆಯನ್ನು ಹಾಗೆ ಬಳಸುವುದನ್ನಂತೂ ನಾನೆಂದೂ ಒಪ್ಪಿರಲಿಲ್ಲ. ಇದಕ್ಕಿಂತ ಕ್ರೂರ ವಾಸ್ತವದ ಸಂಗತಿಗಳನ್ನು ಲಂಕೇಶ್ ಅದೆಷ್ಟು ಸಂಯಮ ಮತ್ತು ಘನತೆಯಲ್ಲಿ ಬರೆಯುತ್ತಿದ್ದರು, ಅದೆಂದೂ ಜನರ ಅಭಿರುಚಿಯನ್ನು ಬೆಳೆಸಿತೇ ಹೊರತು ಕೆಳಮಟ್ಟಕ್ಕಿಳಿಸಿರಲಿಲ್ಲ ಎನ್ನುವ ನನ್ನ ಮಾತು ಅವಳಲ್ಲಿ ಕಸಿವಿಸಿ ಹುಟ್ಟಿಸಿದರೂ, ‘‘ಕಾಲಾನೇ ಹಾಗಿದೆ, ಅವರಿಗೆ ಅರ್ಥವಾಗುವ ಭಾಷೆಯೇ ಇದು’’ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು. ‘‘ಯಾವಾಗ ಏನಾಗುತ್ತೋ ಗೊತ್ತಿಲ್ಲ, ನಾನಂತೂ ವಿಲ್ ಮಾಡಿ ಇಟ್ಟಿದ್ದೀನಿ, ನೀನೂ ಮಾಡು ಬೇಗ’’ ಅಂತ ಹಲವಾರು ಬಾರಿ ಅವಳು ಹೇಳಿದ್ದುಂಟು. ಆದರೆ ಆ ಘಳಿಗೆ ಅಷ್ಟು ಅನಿರೀಕ್ಷಿತವಾಗಿ ಎರಗೀತೆಂಬ ಕಲ್ಪನೆಯೇ ಇರಲಿಲ್ಲ. ಆ ಅಘಾತದಿಂದ ಇಂದಿಗೂ ಹೊರಬಂದಿದ್ದೇನೆ ಎಂದು ನನಗನ್ನಿಸುವುದಿಲ್ಲ.

ಅವಳನ್ನು, ಅವಳು ಹಿಡಿದ ದಾರಿ ಕಾನೂನಿಗೆ ವಿರುದ್ಧ ಎನ್ನುವವರ ಮಾತನ್ನು ಗ್ರಹೀತದಲ್ಲಿಟ್ಟುಕೊಂಡೇ ನಾನು ಯಾವಾಗಲೂ ಯೋಚಿಸುವ ಅಂಶವೆಂದರೆ, ಕರ್ನಾಟಕದ ಮೂಲೆ ಮೂಲೆಗಳಿಂದ ಜನ ಅವಳನ್ನು ಕಡೆಯ ಬಾರಿಗೆ ನೋಡಲು ಲಾರಿ, ಬಸ್ಸು, ರೈಲುಗಳಲ್ಲಿ, ತಾವೇ ವಾಹನ ಮಾಡಿಕೊಂಡು ಧಾವಿಸಿದರಲ್ಲ. ಅದನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು? ಈ ಪ್ರೀತಿ, ಈ ಅಭಿಮಾನದ ಮೂಲ ಯಾವುದು? ಅವಳು ಅವರನ್ನು ತಲುಪಿದ್ದಳು ಎಂದೇ ಅರ್ಥ. ಹಾಗಿದ್ದರೆ ಇದಕ್ಕಿಂತ ಸಾರ್ಥಕ ಬದುಕು ಯಾವುದು? ಸ್ವಕೇಂದ್ರದಿಂದ ಹೊರ ಬಂದು, ಜನಪರ ಹೋರಾಟಗಳಲ್ಲಿ ತನ್ನನ್ನು ಮುಳುಗಿಸಿಕೊಂಡ ಗೌರಿಯ ವ್ಯಕ್ತಿತ್ವ, ಬದುಕು ಎಲ್ಲವೂ ಈ ಕಾಲಘಟ್ಟದ ಅಗತ್ಯ ಮತ್ತು ಅನಿವಾರ್ಯಗಳನ್ನು, ಸವಾಲುಗಳನ್ನು ಉದ್ದೇಶಿಸಿದ್ದಾಗಿತ್ತು. ಆದರೆ ಅದು ಕಡು ಕಷ್ಟದ ದಾರಿಯಾಗಿತ್ತು. ಸಮುದಾಯದ ಪಟ್ಟಭದ್ರರನ್ನು ಎದುರು ಹಾಕಿಕೊಳ್ಳುವ ಅಪಾಯದ ದಾರಿಯಾಗಿತ್ತು, ಜೀವವನ್ನೇ ಬಲಿಕೊಡಬೇಕಾದ ಜೀವನ್ಮರಣದ ದಾರಿಯೂ ಆಗಿತ್ತು. ಆರಂಭದಲ್ಲಿ ಅವಳಿಗೆ ಇದರ ಅರಿವು ಆಗಿತ್ತೋ ಇಲ್ಲವೋ, ನಂತರದ ದಿನಗಳಲ್ಲಿ ಇದರ ಬಗ್ಗೆ ಅವಳಿಗೆ ಅಪಾರ ಸ್ಪಷ್ಟತೆಯಿತ್ತು. ಇದಕ್ಕೆ ಅವಳು ಸಿದ್ಧಳೂ ಆಗಿದ್ದಳು ಎಂದೇ ನನಗನ್ನಿಸುತ್ತದೆ. ಬದುಕನ್ನು ತೇದು ಬಿಡಲು, ಆಹುತಿ ಕೊಡಲು ಒಳಗಿನಿಂದ ಅವಳು ನಿರ್ಧರಿಸಿದ್ದಳು.

ಇಷ್ಟೆಲ್ಲ ಇದ್ದೂ ನನಗನ್ನಿಸುವುದು, ಅವಳ ಹತ್ಯೆ ಕೇವಲ ದುಃಖಿಸುವುದರಲ್ಲಿ ಮುಕ್ತಾಯವಾಗಬೇಕಾದ್ದಲ್ಲ. ಅವಳ ಹತ್ಯೆ ನಿಷ್ಪ್ರಯೋಜಕವಾಗದಂತೆ, ಅವಳು ಮುನ್ನಡೆಸಿದ ಜನಪರ ಹೋರಾಟಗಳನ್ನು, ಅದು ಯಾವ ರೂಪದಲ್ಲಾದರೂ ಸರಿಯೇ ನಾವು ಮುಂದುವರಿಸಬೇಕು. ಇದೇ ಅವಳಿಗೆ ನಾವು ತೋರಿಸಬಹುದಾದ ಪ್ರೀತಿ ಮತ್ತು ಗೌರವ. ಲಹರಿಯಲ್ಲಿದ್ದಾಗ ಅವಳು ‘‘ಏನ್ರಿ ಮೇಡಂ’’ ಅಂತಲೇ ಮಾತು ಶುರು ಮಾಡುತ್ತಿದ್ದ್ದುದು. ಈಗಲೂ ಎಷ್ಟೋ ಬಾರಿ, ಅವಳ ಫೋನ್ ಬರುತ್ತೇನೋ ಅಂತ ಕಾಯುತ್ತೇನೆ.

ನಯನದೊಳಂ ಎರ್ದೆಯೊಳಂ

ನಿನ್ನಯ ರೂಪಿರ್ದಪುದು

ನಿನ್ನಯ ಮಾತಿರ್ದಪುದು ನನ್ನಯ ಕಿವಿಯೊಳಗೆ

ವಿಯೋಗಮೆಂತಾದುದಯ್ಯ ಎನಗುಂ ನಿನಗುಂ

ಹೀಗೆ ಸಮಾಧಾನ ಮಾಡಿಕೊಂಡರೂ ಯಾಕೆ ಕಣ್ಣು ತುಂಬಿ ಬರುತ್ತದೆ?

Writer - ಎಂ. ಎಸ್. ಆಶಾದೇವಿ

contributor

Editor - ಎಂ. ಎಸ್. ಆಶಾದೇವಿ

contributor

Similar News