ಮುಂಬೈಯನ್ನು ಪಿಒಕೆಗೆ ಹೋಲಿಸಿದ ಕಂಗನಾ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ಅಠಾವಳೆ

Update: 2020-09-05 06:13 GMT

ಮುಂಬೈ, ಸೆ.5:ಮುಂಬೈ ಮಹಾನಗರವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕೆ ಹೋಲಿಸಿ, ಮುಂಬೈ ಪೊಲೀಸರನ್ನು ಟ್ವಟರ್‌ನಲ್ಲಿ ಟೀಕಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಕೇಂದ್ರ ಸಚಿವ ರಾಮದಾಸ್ ಅಠವಳೆ ಬೆಂಬಲಿಸಿದ್ದಾರೆ.

  ಮುಂಬೈಯನ್ನು ಪಿಒಕೆಗೆ ಹೋಲಿಸಿರುವ ಕಂಗನಾ ವಿರುದ್ಧ ಆಡಳಿತಾರೂಢ ಶಿವಸೇನೆ ಕೆಂಡಕಾರಿದ್ದು, ನಟಿಗೆ ಮುಂಬೈ ಪೊಲೀಸರ ಬಗ್ಗೆ ಭಯವಿದ್ದರೆ ಇನ್ಯಾವತ್ತೂ ಮುಂಬೈಗೆ ಬರಲೇಬಾರದು ಎಂದಿದೆ.

ಮುಂಬೈ ಅಥವಾ ಮಹಾರಾಷ್ಟ್ರ ಅಸುರಕ್ಷಿತ ಎಂದು ಹೇಳುವವರಿಗೆ ರಾಜ್ಯದಲ್ಲಿ ನೆಲೆಸುವ ಹಕ್ಕಿಲ್ಲ. ಕೊರೋನ ಸಮಯದಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿರುವ ಮುಂಬೈ ಪೊಲೀಸರ ಕುರಿತು ಕಂಗನಾ ನೀಡಿರುವ ಹೇಳಿಕೆ ಖಂಡನಾರ್ಹ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

"ನನಗೆ ಸತ್ಯಾಂಶ ಏನೆಂದು ಸಂಪೂರ್ಣ ಗೊತ್ತಿಲ್ಲ. ಆದರೆ ಶಿವಸೇನೆಯ ಸಂಸದ ಸಂಜಯ್ ರಾವುತ್ ಅವರು ಕಂಗನಾ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ. ರಾವತ್ ನನಗೆ ಉತ್ತಮ ಸ್ನೇಹಿತರಾಗಿದ್ದಾರೆ. ಅವರೋರ್ವ ಶಿವಸೇನೆಯ ನಾಯಕ ಹಾಗೂ ಸಾಮ್ನಾದ ಸಂಪಾದಕರಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ ಕುಟುಂಬಕ್ಕೆ ನ್ಯಾಯ ಸಿಗಲು ಹೋರಾಡುತ್ತಿರುವ ಕಂಗನಾ ಹಾಗೂ ಅವರ ಕುಟುಂಬಕ್ಕೆ ನಮ್ಮ ಬೆಂಬಲವಿದೆ'' ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಅಠವಳೆ ಎಎನ್‌ಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News