ಚೀನಾ ಸೈನಿಕರಿಂದ ಐವರು ಭಾರತೀಯರ ಅಪಹರಣ: ಕಾಂಗ್ರೆಸ್ ಶಾಸಕನ ಆರೋಪ

Update: 2020-09-05 14:29 GMT

ಹೊಸದಿಲ್ಲಿ, ಸೆ.5:ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ಐವರು ಭಾರತೀಯರನ್ನು ಚೀನಾದ ಸೇನೆ ಅಪಹರಿಸಿ ಒತ್ತೆ ಸೆರೆಯಲ್ಲಿಟ್ಟುಕೊಂಡಿದ್ದು, ಇದೊಂದು ಆಘಾತಕಾರಿ ಸುದ್ದಿಯಾಗಿದೆ.ಕೆಲವು ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದು, ಚೀನಾ ಸೇನೆಗೆ ತಕ್ಕ ಉತ್ತರ ನೀಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ಟ್ವೀಟಿಸಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ)ಅಪಹರಿಸಿರುವ ಐವರು ಭಾರತೀಯರ ಹೆಸರನ್ನು ಒಳಗೊಂಡ ಫೇಸ್‌ಬುಕ್ ಪೋಸ್ಟ್‌ನ ಸ್ಟ್ರೀನ್‌ಶಾಟ್‌ನ್ನು ಎರಿಂಗ್ ಟ್ವೀಟ್ ಮಾಡಿದ್ದಾರೆ.

ಐವರು ಭಾರತೀಯರನ್ನು ಯಾವಾಗ ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ನಮೂದಿಸಿಲ್ಲ. ಭಾರತದ ನಾಗರಿಕರು ಮೀನುಗಾರಿಕೆಗೆ ತೆರಳಿದ ವೇಳೆ ಅಪಹರಿಸಿದ್ದಾರೆ ಎಂದು ನಿನೊಂಗ್ ಎರಿಂಗ್ ಹೇಳಿದ್ದಾರೆ.

ಮಾರ್ಚ್ 19ರಂದು ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ಅಸಪಿಲಾ ಸೆಕ್ಟರ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು 21ರ ಹರೆಯದ ಯುವಕನನ್ನು ಅಪಹರಿಸಿತ್ತು.

ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕ ಈ ಅಪಹರಣದ ಕುರಿತು ಟ್ವೀಟ್ ಮಾಡಿದ್ದಾರೆ.

 ‘‘ನ್ಯಾಕೋ ಸಮೀಪದ ಅರಣ್ಯದಲ್ಲಿ ಭೇಟಿಯಾಡುತ್ತಿದ್ದ ಟಾಗಿನ್ ಸಮುದಾಯಕ್ಕೆ ಸೇರಿದ ಐವರನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಪಹರಿಸಿರುವುದು ಸಾಮಾಜಿಕ ಜಾಲತಾಣದ ಮೂಲಕ ನಮಗೆ ತಿಳಿಯಿತು. ನಾಪತ್ತೆಯಾದವರ ಕುಟುಂಬ ಯಾವುದೇ ದೂರು ದಾಖಲಿಸಿಲ್ಲ’’ ಎಂದು ಅಪ್ಪರ್ ಸುಬಾನ್ಸಿರಿಯ ಪೊಲೀಸ್ ಅಧೀಕ್ಷಕ ಕೇನಿ ಬಗ್ರಾ ತಿಳಿಸಿದ್ದಾರೆ.

 ‘‘ಸತ್ಯ ಪರಿಶೀಲಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ವಾಸ್ತವ ಗಡಿ ರೇಖೆಯಿಂದ ಸ್ಥಳೀಯರನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಪಹರಿಸಿ, ಬಳಿಕ ಬಿಡುಗಡೆ ಮಾಡಿದ ಈ ಹಿಂದಿನ ಘಟನೆಗಳ ಬಳಿಕ ನಾವು ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ’’ ಎಂದು ಅವರು ಹೇಳಿದ್ದಾರೆ.

ನಾಪತ್ತೆಯಾದವರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರ ಕಚೇರಿ ಡ್ಯಾಪೋರಿಜೊದಿಂದ 130 ಕಿ.ಮೀ. ದೂರದಲ್ಲಿರುವ ನ್ಯಾಕೊ ಗ್ರಾಮದಲ್ಲಿ 400ಕ್ಕಿಂತ ಕಡಿಮೆ ಜನರು ವಾಸಿಸುತ್ತಿದ್ದಾರೆ. ಆದರೆ, ಅಲ್ಲಿ ಪೊಲೀಸ್ ಠಾಣೆ ಇದೆ. ‘‘ಮಾಹಿತಿ ಸಂಗ್ರಹಿಸಲು ಅಲ್ಲಿನ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ತಿಳಿಸಿದ್ದೇನೆ’’ ಎಂದು ಬಾಗ್ರಾ ಹೇಳಿದ್ದಾರೆ.

ಎರಡು ತಿಂಗಳ ಹಿಂದೆ ವಾಸ್ತವ ಗಡಿ ನಿಯಂತ್ರಣ ರೇಖೆಯ ಸಮೀಪದಿಂದ ಟಾಗಿನ್ ಸಮುದಾಯಕ್ಕೆ ಸೇರಿದ ಬೇಟೆಗಾರನನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೆರೆ ಹಿಡಿದಿತ್ತು. ಉಭಯ ದೇಶಗಳ ಸೇನಾಧಿಕಾರಿಗಳ ನಡುವಿನ ಮಾತುಕತೆ ಬಳಿಕ ತಿಂಗಳ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿತ್ತು ಎಂದು ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News