×
Ad

ಮುಹರ್ರಂ ಮೆರವಣಿಗೆ ನಡೆಸಿದ್ದಕ್ಕೆ ಎನ್‍ಎಸ್‍ಎ; 10 ದಿನ ಗಣೇಶೋತ್ಸವ ಆಚರಿಸಿದ ಬಿಜೆಪಿ ಶಾಸಕನ ವಿರುದ್ಧ ಕ್ರಮವಿಲ್ಲ!

Update: 2020-09-05 14:11 IST

ಭೋಪಾಲ್:  ಆಗಸ್ಟ್ 30ರಂದು ಮುಹರ್ರಂ ಮೆರವಣಿಗೆಯ ನೇತೃತ್ವ ವಹಿಸಿದ್ದರೆನ್ನಲಾದ ಇಂದೋರ್ ನಗರದ ಮಾಜಿ ಕಾರ್ಪೊರೇಟರ್ ಉಸ್ಮಾನ್ ಪಟೇಲ್ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಲಾಗಿದೆ. ಆದರೆ ಇಂದೋರ್ ಬಿಜೆಪಿ ಶಾಸಕ ರಮೇಶ್ ಮೆಂಡೋಲ ಅವರು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ 10 ದಿನಗಳ ಕಾಲ ಗಣೇಶ ಚತುರ್ಥಿ ಆಚರಣೆಯನ್ನು ಆಯೋಜಿಸಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಿಯಮಾವಳಿಗಳನ್ನು ಉಲ್ಲಂಘಿಸಿ ಪೆಂಡಾಲ್ ಹಾಕಿ  ಭರ್ಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತೆನ್ನಲಾಗಿದೆ.  ಶಾಸಕನ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹಿಸಿದೆಯಾದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು thewire.in ವರದಿ ಮಾಡಿದೆ.

ಆದರೆ ಮುಹರ್ರಂ ಮೆರವಣಿಗೆ ಸಂಬಂಧಿಸಿದಂತೆ 28 ಜನರ ವಿರುದ್ಧ  ಪ್ರಕರಣ ದಾಖಲಿಸಿರುವ ಇಂದೋರ್ ಪೊಲೀಸರು ಉಸ್ಮಾನ್ ಪಟೇಲ್ ಸಹಿತ ಐವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಿದ್ದಾರೆ. ಇತರ 23 ಮಂದಿಯ ವಿರುದ್ಧ ಐಪಿಸಿಯ ಸೆಕ್ಷನ್ 188, 269, 270 ಹಾಗೂ 151 ಅನ್ವಯ ಪ್ರಕರಣ ದಾಖಲಿಸಲಾಗಿದ್ದು ಎಲ್ಲರನ್ನೂ ಇಂದೋರ್ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.

ಉಸ್ಮಾನ್ ಪಟೇಲ್ ಅವರು ಫೆಬ್ರವರಿಯಲ್ಲಿ ಸಿಎಎ ವಿರೋಧಿಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಉಸ್ಮಾನ್ ಕುಟುಂಬದ ನಾಲ್ಕು ಮಂದಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಪಕ್ಷವನ್ನು ತೊರೆದಿರುವುದಕ್ಕೆ ಅವರಿಗೆ ಬಿಜೆಪಿ ಪಾಠ ಕಲಿಸಲು ಇಚ್ಛಿಸಿದೆ ಎಂದು ಉಸ್ಮಾನ್ ಅವರ ಕಿರಿಯ ಪುತ್ರ ಝೋಯೆಬ್ ಪಟೇಲ್ ಹೇಳುತ್ತಾರಲ್ಲದೆ, ಆರೋಪಗಳೆಲ್ಲವೂ ಸುಳ್ಳು, ಘಟನೆ ನಡೆದಾಗ ಅವರು ಮನೆಯಲ್ಲಿದ್ದರು ಎಂದು ಹೇಳುತ್ತಾರೆ.

ಇಂದೋರ್ ಮೇಯರ್ ಮಾಲಿನಿ ಗೌಡ್ ಅವರು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದ ನಂತರ ಪೊಲೀಸರು ಎನ್‍ಎಸ್‍ಎ ಹೇರಿದರು ಎನ್ನಲಾಗುತ್ತಿದೆ.

ಮುಹರ್ರಂ ಮೆರವಣಿಗೆಗೆ ಹೇರಲಾಗಿದ್ದ ನಿಷೇಧ ತೆರವುಗೊಳಿಸಲಾಗಿದೆ ಎಂಬ ನಕಲಿ ವಾಟ್ಸ್ಯಾಪ್ ಸಂದೇಶ ನಂಬಿ ಆಗಸ್ಟ್ 30ರಂದು ಖಜ್ರಾನ ಪ್ರದೇಶದಲ್ಲಿ ದೊಡ್ಡ ಗುಂಪು ಸೇರಿತ್ತೆನ್ನಲಾಗಿದೆ.

ಈ ಕುರಿತಂತೆ ಇಂದೋರ್ ಎಸ್‍ಪಿ ವಿಜಯ್ ಖತ್ರಿ ಮಾತನಾಡಿ, ಮುಹರ್ರಂ ಮುಂಚೆ ಸಭೆ ನಡೆಸಿದಾಗ ಮೆರವಣಿಗೆ ನಡೆಸದೇ ಇರಲು ಒಪ್ಪಿದ್ದ ಉಸ್ಮಾನ್ ನಂತರ ಅನುಮತಿಯಿಲ್ಲದೆ ಮೆರವಣಿಗೆ ನಡೆಸಿದ್ದಾರೆ. ಅವರು ಮತೀಯ ಸಾಮರಸ್ಯ ಕೆಡಿಸಲು ಯತ್ನಿಸಿದ್ದಾರೆ, ಆದರೆ ಬಿಜೆಪಿ ಶಾಸಕ ರಮೇಶ್ ಮೆಂಡೋಲ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಪೆಂಡಾಲ್ ಅಳವಡಿಸಿಲ್ಲ, ಮನೆಯಲ್ಲಿ ಗಣೇಶ ಹಬ್ಬ ಆಚರಣೆಗೆ ಅಡ್ಡಿಯಿಲ್ಲ, ಅವರು ಮನೆಯಲ್ಲಿ ಆಚರಿಸಿದ್ದರು ಎಂದು ಹೇಳಿದ್ದಾರೆ.

ಆದರೆ ಸ್ಥಳೀಯರ ಪ್ರಕಾರ ನಂದನನಗರದ ಸರಕಾರಿ ಶಾಲೆಯ ಮೈದಾನದಲ್ಲಿ ಪೆಂಡಾಲ್ ಹಾಕಲಾಗಿತ್ತು, ಅಷ್ಡೇ ಅಲ್ಲದೆ ರಮೇಶ್ ಅವರು ಫೇಸ್ ಬುಕ್ ನಲ್ಲಿ ಐದು ಅಡಿ ಎತ್ತದ ಗಣೇಶನ ವಿಗ್ರಹದ ಚಿತ್ರಗಳನ್ನೂ ವಿಸರ್ಜನೆಗಿಂತ ಮುನ್ನ ಪೋಸ್ಟ್ ಮಾಡಿದ್ದರು. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಅಚ್ಚರಿ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News