ಮಾನಹಕ್ಕುಗಳನ್ನು ಎತ್ತಿಹಿಡಿದಿದ್ದ ನ್ಯಾಯಾಧೀಶ-ವಿವಾದಗಳಿಂದ ಸುದ್ದಿಯಾಗಿದ್ದ ಜಿಲ್ಲಾಧಿಕಾರಿ

Update: 2020-09-05 12:43 GMT
ಗೋವಿಂದ್ ಮಾಥುರ್                      ಚಂದ್ರ ಭೂಷಣ್ ಸಿಂಗ್

ಹೊಸದಿಲ್ಲಿ: ಗೋರಖಪುರ್ ನ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ರದ್ದುಗೊಳಿಸಿ ಅವರ ಬಿಡುಗಡೆಗೆ ಆದೇಶಿಸಿದ ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಅವರು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಿ ಕೆಲ ಮಹತ್ತರ ತೀರ್ಪುಗಳನ್ನು ಈ ಹಿಂದೆಯೂ ನೀಡಿದ್ದರು. ಹಲವು ಘಟನೆಗಳಲ್ಲಿ ಹಕ್ಕುಗಳನ್ನು ಗೌರವಿಸಿ ಅವರು ನೀಡಿದ್ದ ತೀರ್ಪುಗಳ ವಿವರ ಇಲ್ಲಿದೆ.

ಆಲಿಘರ್ ಮುಸ್ಲಿಂ ವಿವಿಯಲ್ಲಿ ಪೊಲೀಸ್ ದೌರ್ಜನ್ಯ: ಆಲಿಘರ್ ವಿವಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ನಡೆದಿದೆಯೆನ್ನಲಾದ ಪೊಲೀಸ್ ದೌರ್ಜನ್ಯಗಳ ಕುರಿತಂತೆ ತನಿಖೆಗೆ ಈ ವರ್ಷದ ಜನವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಮಾಥುರ್ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶಿಸಿತ್ತಲ್ಲದೆ, ಈ ಘಟನೆ `ಮಾನವ ಹಕ್ಕುಗಳ ಉಲ್ಲಂಘನೆ' ಎಂದು ಹೇಳಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಆರು ಮಂದಿ ಸದಸ್ಯರ ಸಮಿತಿಯನ್ನೂ ಪೀಠ ರಚಿಸಿತ್ತು. ಈ ಸಮಿತಿ ಮುಂದೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತಲ್ಲದೆ ಗಾಯಾಳು ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕೆಂದೂ ಹೇಳಿತ್ತು.

ಅಂತೆಯೇ ತಪ್ಪಿತಸ್ಥ ಪೊಲೀಸರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಉತ್ತರ ಪ್ರದೇಶ ಡಿಜಿಪಿಗೆ  ಸೂಚಿಸಿತ್ತು.

ಬ್ಯಾನರುಗಳಲ್ಲಿ ಸಿಎಎ ವಿರೋಧಿಗಳ ಫೋಟೋ, ಹೆಸರು ವಿಳಾಸ ಪ್ರಕಟಿಸಿದ ಘಟನೆ: ಉತ್ತರ ಪ್ರದೇಶದಲ್ಲಿ ಇನ್ನೊಂದು ಭಾರೀ ಸುದ್ದಿ ಮಾಡಿದ ಪ್ರಕರಣ ಆದಿತ್ಯನಾಥ್ ಸರಕಾರವು ಸಿಎಎ ವಿರೋಧಿ ಹೋರಾಟಗಾರರ ಫೋಟೋ, ಹೆಸರು, ವಿಳಾಸ ಇರುವ ಬ್ಯಾನರುಗಳನ್ನು ಹಾಕಿದ್ದ ಪ್ರಕರಣವಾಗಿದೆ. ಮಾರ್ಚ್ ತಿಂಗಳಲ್ಲಿ ಈ ವಿಚಾರ ಬೆಳಕಿಗೆ ಬಂದಂತೆ ಸ್ವಯಂ ಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಮಾಥುರ್, ರವಿವಾರ ವಿಶೇಷ ವಿಚಾರಣೆ ಏರ್ಪಡಿಸಿದ್ದರಲ್ಲದೆ  ಈ ಪ್ರಕರಣ ಸಂವಿಧಾನದಲ್ಲಿ  ಅಡಕವಾಗಿರುವ ಹಕ್ಕುಗಳ  ಗಂಭೀರ ಉಲ್ಲಂಘನೆಯಾಗಿದೆ ಹಾಗೂ ಇಂತಹ ಅನ್ಯಾಯಕ್ಕೆ ನ್ಯಾಯಾಲಯಗಳು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಕೆಲವೊಂದು ಜನರ ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದೇಕೆ ಎಂಬುದಕ್ಕೆ ರಾಜ್ಯ ಸರಕಾರ  ವಿವರಿಸಲು ವಿಫಲವಾಗಿದೆ ಹಾಗೂ ಇದು ನಾಗರಿಕರ ಖಾಸಗಿತನದ ಹಕ್ಕಿನಲ್ಲಿ ಅನಗತ್ಯ  ಹಸ್ತಕ್ಷೇಪ ಎಂದೂ ಹೇಳಿತ್ತು. ಈ ತೀರ್ಪಿನ ವಿರುದ್ಧ ಉತ್ತರ ಪ್ರದೇಶ ಸರಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಆದರೆ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸಿತ್ತು.

ವಲಸಿಗ ಕಾರ್ಮಿಕರ ಪ್ರಕರಣ: ಲಾಕ್ ಡೌನ್ ವೇಳೆ ತಮ್ಮ ಊರುಗಳಿಗೆ ವಾಪಸಾಗಲು ನೂರಾರು ವಲಸಿಗ ಕಾರ್ಮಿಕರು ಪಡುತ್ತಿದ್ದ ಬವಣೆಯ  ಕುರಿತಂತೆಯೂ ಅಲಹಾಬಾದ್ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿತ್ತಲ್ಲದೆ, ತಲಾ 400 ಕಾರ್ಮಿಕರಿರುವ ವಲಸಿಗ ಕಾರ್ಮಿಕರ ಗುಂಪುಗಳ ಹಿತಾಸಕ್ತಿ ರಕ್ಷಿಸಲು ಅಧಿಕಾರಿಗಳನ್ನು ನೇಮಿಸುವಂತೆ ಹಾಗೂ ಅವರ ಆರೋಗ್ಯ ಮತ್ತು ಅವರ ಜೀವನದ ಸ್ಥಿತಿಗತಿಗಳನ್ನು ನಿಯಮಿತವಾಗಿ ಗಮನಿಸುತ್ತಿರಬೇಕೆಂದು ಸೂಚಿಸಿತು.

ಕೋವಿಡ್ ಸಮಸ್ಯೆ:  ಉತ್ತರ ಪ್ರದೇಶದ ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಜಸ್ಟಿಸ್ ಮಾಥುರ್ ನೇತೃತ್ವದ ಪೀಠ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತ್ತು. ಇದೀಗ ಈ ಪ್ರಕರಣವನ್ನು ಇನ್ನೊಂದು ವಿಭಾಗೀಯ ಪೀಠಕ್ಕೆ ವಹಿಸಲಾಗಿದ್ದು ಸಾಮಾಜಿಕ ಅಂತರ ಕುರಿತಾದ ನಿಯಮಗಳ  ಜಾರಿ ಮೇಲೆ ನಿಗಾ ಇಡುವ ಉದ್ದೇಶ ಇದರ ಹಿಂದೆ ಇದೆ.

ಕಫೀಲ್ ಖಾನ್‍ರನ್ನು ಜೈಲಿಗೆ ಕಳುಹಿಸಿದ್ದ ಆಲಿಘರ್ ಜಿಲ್ಲಾಧಿಕಾರಿ ಚಂದ್ರ ಭೂಷಣ್ ಸಿಂಗ್  ಬಗ್ಗೆ ಒಂದಿಷ್ಟು

ಡಾ. ಕಫೀಲ್ ಖಾನ್ ಅವರನ್ನು ಮಥುರಾ ಜೈಲಿನಿಂದ ಬಿಡುಗಡೆಗೊಳಿಸುವ ಆದೇಶ ಹೊರಡಿಸುವ ಸಂದರ್ಭ ಅವರ ವಿರುದ್ಧ ಎನ್‍ಎಸ್‍ಎ ಹೇರಿದ್ದ ಆಲಿಘರ್ ಜಿಲ್ಲಾಧಿಕಾರಿ ಚಂದ್ರ ಭೂಷಣ್ ಸಿಂಗ್ ಕುರಿತು ಅಲಹಾಬಾದ್ ಹೈಕೋರ್ಟ್ ಹೀಗೆ ಹೇಳಿತ್ತು. “ಒಬ್ಬ ಸೂಕ್ತ ಆಲೋಚನಾಶಕ್ತಿ ಇರುವ ವ್ಯಕ್ತಿ ಆಲಿಘರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತೀರ್ಮಾನಕ್ಕೆ ಬಂದ ರೀತಿಯಲ್ಲಿ ಮಾಡುತ್ತಾರೆಯೇ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ” ಎಂದು ಹೇಳಿತ್ತು.

ಫೆಬ್ರವರಿ 10ರಂದು ಆಲಿಘರ್ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರು ಕಫೀಲ್ ಖಾನ್ ಗೆ ಜಾಮೀನು ನೀಡಿದ ನಂತರ ಚಂದ್ರಭೂಷಣ್ ಸಿಂಗ್ ಅವರು ಖಾನ್ ವಿರುದ್ಧ ಫೆಬ್ರವರಿ 13ರಂದು ಎನ್‍ಎಸ್‍ಎ ಹೇರಿದ್ದರು.

ಸಿಂಗ್ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಈ ಹಿಂದೆ  ಅವರು ಆಝಂಘರ್ ಹಾಗೂ ಸೋನಭದ್ರ ಜಿಲ್ಲೆಯ ಡೀಎಂ ಮತ್ತು ಕಲೆಕ್ಟರ್ ಆಗಿದ್ದ ಸಂದರ್ಭವೂ ವಿವಾದವೇರ್ಪಟಿತ್ತು. 2016ರಲ್ಲಿ ಅವರು ಮಾಡಿದ ಗಣಿಗಾರಿಕೆ  ಸ್ಥಳ ಹಂಚಿಕೆಯ ವಿಚಾರವೂ  ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರನ್ನು ಮುಂದಿನ  ವರ್ಷ ಲಕ್ನೋಗೆ ವರ್ಗಾಯಿಸಲಾಗಿತ್ತಲ್ಲದೆ ನಂತರ ಪ್ರಯಾಗ್ ರಾಜ್ ನ ಹೆಚ್ಚುವರಿ ಅಬಕಾರಿ ಆಯುಕ್ತರಾಗಿ ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News