ದುಬಾರಿ ವೆಚ್ಚ: ಬುಲೆಟ್ ಟ್ರೈನ್ ಯೋಜನೆ ಇನ್ನೂ ಐದು ವರ್ಷ ವಿಳಂಬ ಸಾಧ್ಯತೆ

Update: 2020-09-05 12:55 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆ ಹಲವಾರು ಅಡೆತಡೆಗಳನ್ನು ಎದುರಿಸುತ್ತಿದ್ದು, ಯೋಜನೆ ಇನ್ನೂ ಐದು ವರ್ಷ ವಿಳಂಬಗೊಳ್ಳುವ ಸಾಧ್ಯತೆಯಿದೆ.

ಈ ಯೋಜನೆ ಅಕ್ಟೋಬರ್ 2028ರೊಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆ ರೈಲ್ವೆ ಅಧಿಕಾರಿಗಳದ್ದಾಗಿದೆ. ಈ ಹಿಂದಿನ ಗಡುವಿನಂತೆ ಯೋಜನೆ ಡಿಸೆಂಬರ್ 2023ರಲ್ಲಿ ಪೂರ್ಣಗೊಳ್ಳಬೇಕಿತ್ತು. ಈ 508 ಕಿ.ಮೀ. ಉದ್ದದ ಮುಂಬೈ-ಅಹ್ಮದಾಬಾದ್ ನಡುವಿನ  ಹೈ ಸ್ಪೀಡ್ ರೈಲ್ ಕಾರಿಡಾರ್ ಯೋಜನೆಯನ್ನು ಜಪಾನ್ ನಿಂದ ಶೇ0.1ರಷ್ಟು ಬಡ್ಡಿ ದರದಲ್ಲಿ ಶೇ 80ರಷ್ಟು ಸಾಲದೊಂದಿಗೆ ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯ ಪ್ರಮುಖ ಭಾಗವಾದ 21 ಕಿಮೀ ಭೂಗತ ಮಾರ್ಗಕ್ಕಾಗಿ ಟೆಂಡರುಗಳನ್ನು ಕರೆಯಲಾಗಿತ್ತಾದರೂ ಜಪಾನಿನ ಯಾವುದೇ ಕಂಪೆನಿ ಈ ಟೆಂಡರಿನಲ್ಲಿ ಭಾಗಿಯಾಗಿಲ್ಲ ಹಾಗೂ ಮೊದಲನೇ ಬಾರಿ ಕರೆಯಲಾದ ಟೆಂಡರ್ ಫಲಪ್ರದವಾಗಿಲ್ಲವೆಂದು ತಿಳಿದು ಬಂದಿದೆ. ಈ 21 ಕಿಮೀ ಭೂಗತ ಮಾರ್ಗದ ಪೈಕಿ ಏಳು ಕಿಮೀ ಭಾಗ ಸಮುದ್ರದಡಿಯಲ್ಲಿ ಬರುತ್ತದೆ.

ಇದಕ್ಕೂ ಮುಂಚೆ ಕರೆಯಲಾದ ಟೆಂಡರುಗಳಲ್ಲೂ ಬಿಡ್ಡರ್ ಗಳು ಸೂಚಿಸಿದ ಮೊತ್ತ ಅಂದಾಜು ಮೊತ್ತಕ್ಕಿಂತ ಶೇ 90ರಷ್ಟು ಹೆಚ್ಚಾಗಿತ್ತು ಹಾಗೂ ಇದಕ್ಕೆ ಭಾರತ ಒಪ್ಪಿಲ್ಲ ಎನ್ನಲಾಗಿದೆ.

ಇನ್ನೊಂದು ವಿಚಾರ ಬುಲೆಟ್ ಟ್ರೈನ್ ಕುರಿತಾಗಿದೆ. ಹಿಟಾಚಿ ಮತ್ತು ಕವಾಸಾಕಿ ಕಂಪೆನಿಗಳು ಮಾತ್ರ ಈ ರೈಲುಗಳನ್ನು ತಯಾರಿಸುತ್ತಿವೆ,  ಆದರೆ ಎರಡೂ ಕಂಪೆನಿಗಳು ಜಂಟಿಯಾಗಿ ಒಂದೇ ಬಿಡ್ ಸಲ್ಲಿಸಲಿವೆಯೆನ್ನಲಾಗಿದ್ದು ಇದು ಕೂಡ ಭಾರತಕ್ಕೆ ಇಷ್ಟವಿಲ್ಲವೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News