ಚೀನಾದ ಆಕ್ರಮಣಕಾರಿ ವರ್ತನೆ ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸುತ್ತಿದೆ: ರಾಜನಾಥ್ ಸಿಂಗ್

Update: 2020-09-05 13:57 GMT

ಹೊಸದಿಲ್ಲಿ,ಸೆ.5: ಚೀನಾದ ಆಕ್ರಮಣಕಾರಿ ವರ್ತನೆಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಚೀನಾದ ರಕ್ಷಣಾ ಸಚಿವ ವೀ ಫೆಂಗ್ ಅವರಿಗೆ ಸ್ಪಷ್ಟವಾದ ಶಬ್ದಗಳಲ್ಲಿ ತಿಳಿಸಿದ್ದಾರೆ.ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ), ಕಾಮನ್ವೆಲ್ತ್ ಸ್ವತಂತ್ರ ರಾಷ್ಟ್ರಗಳು (ಸಿಐಎಸ್) ಮತ್ತು ಸಾಮೂಹಿಕ ಭದ್ರತಾ ಒಪ್ಪಂದ ಸಂಘಟನೆ (ಸಿಎಸ್‌ಟಿಒ)ಗಳ ಸದಸ್ಯ ರಾಷ್ಟ್ರಗಳ ಸಭೆಗಾಗಿ ರಷ್ಯಾದಲ್ಲಿದ್ದ ಉಭಯ ಸಚಿವರು ಲಡಾಖ್‌ನ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆಯ ನಡುವೆಯೇ ಮಾಸ್ಕೋದಲ್ಲಿ ಶುಕ್ರವಾರ ಸಂಜೆ ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆಗಳನ್ನು ನಡೆಸಿದರು. ಉಭಯ ದೇಶಗಳ ಉನ್ನತ ಮಟ್ಟದ ನಿಯೋಗಗಳು ಸಭೆಯಲ್ಲಿ ಪಾಲ್ಗೊಂಡಿದ್ದವು. ಕಳೆದ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಬಳಿಕ ಇದು ಇಂತಹ ಮೊದಲ ಸಭೆಯಾಗಿದ್ದು, ಚೀನಾ ಇದಕ್ಕಾಗಿ ಕೋರಿಕೊಂಡಿತ್ತು.

 ಸಿಂಗ್ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಗಲ್ವಾನ್ ಕಣಿವೆ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಬೆಳವಣಿಗೆಗಳ ಕುರಿತು ಭಾರತದ ನಿಲುವನ್ನು ಫೆಂಗ್ ಅವರಿಗೆ ತಿಳಿಸಿದರು. ಭಾರೀ ಸಂಖ್ಯೆಯಲ್ಲಿ ಸೈನಿಕರ ಜಮಾವಣೆ, ಅವರ ಆಕ್ರಮಣಕಾರಿ ವರ್ತನೆ, ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಿಸುವ ಪ್ರಯತ್ನ ಇವೆಲ್ಲ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ ಎಂದು ಒತ್ತಿ ಹೇಳಿದ ಸಿಂಗ್, ಗಡಿ ನಿರ್ವಹಣೆ ಕುರಿತು ಭಾರತೀಯ ಯೋಧರು ಸದಾ ಅತ್ಯಂತ ಜವಾಬ್ದಾರಿಯುತ ನಿಲುವನ್ನು ತೆಗೆದುಕೊಂಡಿದ್ದಾರೆ,ಆದರೆ ಇದೇ ವೇಳೆ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಅಖಂಡತೆಯನ್ನು ರಕ್ಷಿಸುವ ನಮ್ಮ ದೃಢಸಂಕಲ್ಪದ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟವಾಗಿ ಹೇಳಿದರು ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಗಡಿಯಲ್ಲಿ ಹಿಂದೆಂದೂ ಇಲ್ಲದ ಉದ್ವಿಗ್ನತೆ

1962ರ ಯುದ್ಧದ ಬಳಿಕ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಅತ್ಯಂತ ತಾರಕ ಸ್ಥಿತಿಯಲ್ಲಿದೆ. ಪೂರ್ವ ಲಡಾಖ್‌ನ ದಕ್ಷಿಣ ಪ್ಯಾಂಗಾಂಗ್ ಪ್ರದೇಶದಲ್ಲಿ ಚೀನಾ ಭಾರೀ ಸಂಖ್ಯೆಯಲ್ಲಿ ಸೈನಿಕರು ಮತ್ತು ಟ್ಯಾಂಕ್‌ಗಳ ನಿಯೋಜನೆಯನ್ನು ಆದೇಶಿಸಿದೆ. ಪ್ರದೇಶದಲ್ಲಿಯ ವಿವಾದಿತ ಎಲ್‌ಎಸಿಯುದ್ದಕ್ಕೂ ತನ್ನ ಹಿಡಿತವನ್ನು ಇನ್ನಷ್ಟು ಹೆಚ್ಚಿಸಲು ಭಾರತವು ತನ್ನ ಟ್ಯಾಂಕ್‌ಗಳನ್ನು ಮತ್ತು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ಗಡಿಯಲ್ಲಿ ಉಭಯ ದೇಶಗಳು ತಮ್ಮ ಯುದ್ಧವಿಮಾನಗಳನ್ನೂ ನಿಯೋಜಿಸಿವೆ.

 ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಅವರು ಗಡಿಯಲ್ಲಿ ಸ್ಥಿತಿ ಉದ್ವಿಗ್ನವಾಗಿದೆ ಎಂದು ಬಣ್ಣಿಸಿದ್ದಾರಾದರೂ, ಮಾತುಕತೆಗಳ ಮೂಲಕ ಅದನ್ನು ಸಂಪೂರ್ಣವಾಗಿ ನಿವಾರಿಸಬಹುದಾಗಿದೆ ಎಂದು ಹೇಳಿದ್ದಾರೆ.

ದೇಶದ ಕಣ್ಣುಗಳು ನಮ್ಮ ಮೇಲಿವೆ: ಜ.ನರವಣೆ

ಈ ಘಳಿಗೆಯಲ್ಲಿ ಇಡೀ ದೇಶವು ಸೇನೆಯ ಮೇಲೆ ಕಣ್ಣಿರಿಸಿದೆ ಮತ್ತು ಹಾಲಿ ಸನ್ನಿವೇಶಗಳಲ್ಲಿ ಹುರುಪು ಮತ್ತು ತಾಳ್ಮೆಯಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಅವರು ತನ್ನ ಎರಡು ದಿನಗಳ ಲಡಾಖ್ ಭೇಟಿ ಸಂದರ್ಭ ಯೋಧರನ್ನು ಉದ್ದೇಶಿಸಿ ಹೇಳಿದ್ದಾರೆ.

ಗಡಿ ಸಮೀಪ ಕರ್ತವ್ಯನಿರತ ಯೋಧರನ್ನು ಹುರಿದುಂಬಿಸಿದ ನರವಣೆ,ಪ್ರಸಕ್ತ ಬಿಕ್ಕಟ್ಟಿನ ಸಂದರ್ಭದಲ್ಲಿ ಲಡಾಖ್ ವಿಭಾಗದಲ್ಲಿ ವಿವಿಧ ಕಾರ್ಯಾಚರಣೆಗಳಲ್ಲಿ ಯೋಧರ ಕೊಡುಗೆಗಳನ್ನು ಪ್ರಶಂಸಿಸಿದರು. ಹಾಲಿ ಕಾರ್ಯಾಚರಣೆಗಳಲ್ಲಿ ನಿಯೋಜನೆ ಸಂದರ್ಭ ಯೋಧರು ಹುರುಪು,ತಾಳ್ಮೆ ಮತ್ತು ಸ್ವ-ನಿಯಂತ್ರಣದೊಂದಿಗೆ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News