ಕೊರೋನ ಸೋಂಕು: ದೇಶದಲ್ಲಿ 40 ಲಕ್ಷ ದಾಟಿದ ಕೊರೋನ ಪ್ರಕರಣ

Update: 2020-09-05 14:21 GMT

ಹೊಸದಿಲ್ಲಿ, ಸೆ. 5: ದೇಶದಲ್ಲಿ ಒಂದೇ ದಿನ ದಾಖಲೆಯ 86,432 ಕೊರೋನ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 40 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ.

ಈಗ ದೇಶದಲ್ಲಿ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 40,23,179ಕ್ಕೆ ತಲುಪಿದೆ. ಇದರೊಂದಿಗೆ ಜಗತ್ತಿನಲ್ಲಿ ಕೊರೋನ ಸೋಂಕಿನಿಂದ ಅತಿಯಾಗಿ ತೊಂದರೆಗೀಡಾದ ಅಮೆರಿಕದ ಹಾಗೂ ಬ್ರೆಝಿಲ್‌ನ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಬ್ರೆಝಿಲ್‌ನಲ್ಲಿ ಒಂದೇ ದಿನ ಅತಿ ಹೆಚ್ಚು ಅಂದರೆ 70,000 ಕೊರೋನ ಪ್ರಕರಣಗಳು ದಾಖಲಾಗಿದ್ದವು. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನಿಂದ 1,089 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 69,561ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸುಮಾರು 31 ಲಕ್ಷ ರೋಗಿಗಳು ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಚೇತರಿಕೆಯಾಗುತ್ತಿರುವ ಕೊರೋನ ಸೋಂಕಿತರ ಪ್ರಮಾಣ ಶೇ. 77.2ಕ್ಕೆ ಏರಿಕೆಯಾಗಿದೆ. ಕೊರೋನ ಸೋಂಕಿನ 40 ಲಕ್ಷ ಪ್ರಕರಣಗಳು ದಾಖಲಾಗುವ ಮೂಲಕ ಭಾರತ ಅಮೆರಿಕ ಹಾಗೂ ಬ್ರೆಝಿಲ್‌ನ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ದೇಶದಲ್ಲಿ ಕೇವಲ 13 ದಿನಗಳಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 30 ಲಕ್ಷದಿಂದ 40 ಲಕ್ಷಕ್ಕೆ ಏರಿಕೆಯಾಗಿದೆ. ಇದು ಅಮೆರಿಕ ಹಾಗೂ ಬ್ರೆಝಿಲ್‌ಗಿಂತ ತೀವ್ರಗತಿಯ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಉತ್ತರಪರದೇಶಗಳಲ್ಲಿ ಅತ್ಯಧಿಕ ಕೊರೋನ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿವೆ. ಈ ಐದು ರಾಜ್ಯಗಳಲ್ಲಿ ಶೇ. 62ರಷ್ಟು ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News