ಕಂಗನಾ ರಾಣವತ್‌ಗೆ ಬೆದರಿಕೆ ಹಾಕಿದ ಶಿವಸೇನೆ ಶಾಸಕನನ್ನು ಬಂಧಿಸಿ: ಎನ್‌ಸಿಡಬ್ಲ್ಯು ಆಗ್ರಹ

Update: 2020-09-05 14:36 GMT

ಮುಂಬೈ, ಸೆ. 4: ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ನಟಿ ಕಂಗನಾ ರಾಣವತ್ ಅವರಿಗೆ ಬೆದರಿಕೆ ಒಡ್ಡಿದ ಶಿವಸೇನೆಯ ಶಾಸಕ ಪ್ರತಾಪ್ ಸರ್ನಾಕ್ ಅವರನ್ನು ಕೂಡಲೇ ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶುಕ್ರವಾರ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.

‘‘ಸಂದರ್ಶನವೊಂದರಲ್ಲಿ ಶಿವಸೇನೆ ಶಾಸಕ ಪ್ರತಾಪ್ ಸರ್ನಾಕ್ ಅವರು ಕಂಗನಾ ರಾಣವತ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಮುಂಬೈ ಪೊಲೀಸರು ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕು’’ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತಂತೆ ಕಾಂಗ್ರೆಸ್- ಶಿವಸೇನೆ-ಎನ್‌ಸಿಪಿ ಸರಕಾರ ಹಾಗೂ ಬಾಲಿವುಡ್ ಅನ್ನು ಗುರಿಯಾಗಿರಿಸಿ ಕಂಗನಾ ರಾಣವತ್ ಟೀಕಿಸಿದ್ದರು. ಸರಕಾರ ಹಾಗೂ ಮುಂಬೈ ಪೊಲೀಸರ ವಿರುದ್ಧ ಕಂಗನಾ ರಾಣವತ್ ನಿರಂತರ ವಾಗ್ದಾಳಿ ನಡೆಸಿದ ಬಳಿಕ ಶಿವಸೇನೆ ನಾಯಕ ಸಂಜಯ್ ರಾವತ್ ತಮ್ಮ ಪಕ್ಷದ ಮುಖವಾಣಿಯಾದ ‘ಸಾಮ್ನಾ’ದಲ್ಲಿ ‘‘ಕಂಗನಾ ರಾಣವತ್ ಮುಂಬೈಗೆ ಆಗಮಿಸದಂತೆ ನಾವು ವಿನಮ್ರವಾಗಿ ವಿನಂತಿಸುತ್ತಿದ್ದೇವೆ. ಇದು ಮುಂಬೈ ಪೊಲೀಸರಿಗೆ ಅವಮಾನ ಅಲ್ಲದೆ, ಬೇರೇನೂ ಅಲ್ಲ. ಇದರ ಬಗ್ಗೆ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕು’’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ರಾಣವತ್, ಶಿವಸೇನೆ ನಾಯಕ ಸಂಜಯ್ ರಾವತ್ ನನಗೆ ಬಹಿರಂಗ ಬೆದರಿಕೆ ಒಡ್ಡಿದ್ದಾರೆ. ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾವನೆ ಉಂಟು ಮಾಡುತ್ತದೆ. ಯಾಕೆ ? ಎಂದು ಪ್ರಶ್ನಿಸಿದ್ದರು.

 ಈ ಪ್ರತಿಕ್ರಿಯೆಗೆ ಕಂಗನಾ ರಾಣವತ್ ಅವರನ್ನು ಆಡಳಿತರೂಢ ಪಕ್ಷಗಳ ಹಲವು ನಾಯಕರು ತರಾಟೆಗೆ ತೆಗೆದುಕೊಂಡಿದ್ದರು. ಪ್ರತಾಪ್ ಸರ್ನಾಕ್ ಒಂದು ಹೆಜ್ಜೆ ಮುಂದೆ ಹೋಗಿ, ಕಂಗಣಾ ರಾಣಾವತ್ ಅವರು ಮುಂಬೈಗೆ ಕಾಲಿರಿಸಿದರೆ, ತನ್ನ ಪಕ್ಷದ ಮಹಿಳಾ ಸದಸ್ಯರು ಅವರ ಕೆನ್ನೆಗೆ ಬಾರಿಸಲಿದ್ದಾರೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News