ಕೇಂದ್ರಕ್ಕೆ‘ರಾಜಧರ್ಮ’ವನ್ನು ನೆನಪಿಸಿದ ಕಾಂಗ್ರೆಸ್: ಲಡಾಖ್ ಸ್ಥಿತಿಯ ಕುರಿತು ಸ್ಪಷ್ಟನೆಗೆ ಆಗ್ರಹ

Update: 2020-09-05 16:04 GMT

 ಹೊಸದಿಲ್ಲಿ,ಸೆ.5: ಲಡಾಖ್‌ನಲ್ಲಿ ಗಡಿ ವಿವಾದ ಕುರಿತಂತೆ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಆಗ್ರಹಿಸಿದ ಕಾಂಗ್ರೆಸ್, ಚೀನಾದೊಂದಿಗೆ ಪುನರಪಿ ಮಾತುಕತೆಗಳ ಫಲಿತಾಂಶಗಳನ್ನು ತಿಳಿಯಲು ಜನರು ಬಯಸಿದ್ದಾರೆ ಎಂದು ಹೇಳಿದೆ.

 ತನ್ನ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್‌ ನ ಮುಖ್ಯವಕ್ತಾರ ರಣದೀಪ ಸುರ್ಜೆವಾಲಾ ಅವರು ವಿದೇಶಾಂಗ ಸಚಿವರ ಮಟ್ಟ ಮತ್ತು ಕಾರ್ಪ್ಸ್ ಕಮಾಂಡರ್ ‌ಗಳ ಮಟ್ಟದಿಂದ ಹಿಡಿದು ರಕ್ಷಣಾ ಸಚಿವರ ನಡುವಿನ ಚರ್ಚೆಗಳವರೆಗೆ ವಿವಿಧ ಮಟ್ಟಗಳಲ್ಲಿ ಚೀನಾದೊಂದಿಗೆ ನಡೆಸಿದ ಮಾತುಕತೆಗಳನ್ನು ಪಟ್ಟಿ ಮಾಡಿ, ಈ ಮಾತುಕತೆಗಳ ಫಲಿತಾಂಶವೇನಾಗಿದೆ ಎಂದು ಪ್ರಶ್ನಿಸಿದ್ದಾರೆ. ವಿಷಯದ ಗಂಭೀರತೆಗೆ ಒತ್ತು ನೀಡಲು ಸುರ್ಜೆವಾಲಾ, ‘ಭಾರತ-ಚೀನಾ ಗಡಿಯಲ್ಲಿ ಈ ಹಿಂದೆಂದೂ ಇಲ್ಲದಿದ್ದ ಸ್ಥಿತಿ ನಿರ್ಮಾಣವಾಗಿದೆ ಮತ್ತು 1962ರಿಂದೀಚಿಗೆ ಇಂತಹ ಸ್ಥಿತಿಯನ್ನು ನಾವೆಂದೂ ನೋಡಿರಲಿಲ್ಲ ’ಎಂಬ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ್ದಾರೆ.

 “ನಮ್ಮ ಸರಕಾರವು ಚೀನಾದೊಂದಿಗೆ ಪದೇ ಪದೇ ನಡೆಸಿರುವ ಮಾತುಕತೆಗಳ ಫಲಿತಾಂಶವೇನಾಗಿದೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಚೀನಿ ಅತಿಕ್ರಮಣಗಳನ್ನು ವಿಫಲಗೊಳಿಸಲಾಗಿದೆ ಎನ್ನುವುದು ನಮಗೆ ಖಚಿತಗೊಳ್ಳುವುದು ಹೇಗೆ? ನಮ್ಮ ಮಾತೃಭೂಮಿಯ ರಕ್ಷಣೆಗಾಗಿ ಚೀನಿಯರನ್ನು ಹೇಗೆ ಹಿಮ್ಮೆಟ್ಟಿಸಲಾಗುವುದು ಎಂಬಂತಹ ಪ್ರಶ್ನೆಗಳಿಗೆ ಜನರು ಉತ್ತರಗಳನ್ನು ಬಯಸಿದ್ದಾರೆ” ’ಎಂದಿರುವ ಸುರ್ಜೆವಾಲಾ , “ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ಸಿಂಗ್ ಅವರು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂದು ನಾವು ಆಶಿಸಿದ್ದೇವೆ”. ಇದು ನಿಜವಾದ ರಾಜಧರ್ಮವಾಗಿದೆ. ಉತ್ತರಕ್ಕಾಗಿ ನಾವು ಕಾಯುತ್ತೇವೆ ’ಎಂದಿದ್ದಾರೆ.

ಬಳಿಕ ಆನ್‌ಲೈನ್‌ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ಕಾಂಗ್ರೆಸ್ ನಾಯಕ ರಾಜೀವ ಶುಕ್ಲಾ ಅವರು,‘ಸಮಸ್ಯೆಯನ್ನು ಮಾತುಕತೆಗಳ ಮೂಲಕ ಬಗೆಹರಿಸಬಹುದೆಂದು ನಾವು ಆಶಿಸಿದ್ದೇವೆ ’ಎಂದು ಹೇಳಿದರಾದರೂ, ಸರಕಾರದಿಂದ ವಿರೋಧಾಭಾಸದ ಹೇಳಿಕೆಗಳು ಕಳವಳವನ್ನು ಮೂಡಿಸಿವೆ. ಅದು ಪರಿಸ್ಥಿತಿಯ ಸ್ಪಷ್ಟ ಚಿತ್ರಣವನ್ನು ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News