ಉದ್ಯಮಸ್ನೇಹಿ ರಾಜ್ಯಗಳ ಶ್ರೇಯಾಂಕ ಪಟ್ಟಿ: ಅಗ್ರಸ್ಥಾನ ಕಾಯ್ದುಕೊಂಡ ಆಂಧ್ರ ಪ್ರದೇಶ

Update: 2020-09-05 17:19 GMT

ಹೊಸದಿಲ್ಲಿ, ಸೆ.5: ಉದ್ಯಮಸ್ನೇಹಿ ವಾತಾವರಣ ಕಲ್ಪಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಸತತ ದ್ವಿತೀಯ ಬಾರಿಗೆ ಆಂಧ್ರಪ್ರದೇಶ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕ ಪಟ್ಟಿಯಲ್ಲಿ ಈ ಗೌರವ ದಿಲ್ಲಿಗೆ ಸಂದಿದೆ.

ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ(ಡಿಪಿಐಐಟಿ) ಸಿದ್ಧಪಡಿಸಿರುವ ‘ರಾಜ್ಯ ವ್ಯಾಪಾರ ಸುಧಾರಣೆ ಕ್ರಿಯಾ ಯೋಜನೆ’ ಶ್ರೇಯಾಂಕ ಪಟ್ಟಿಯನ್ನು ಹೊಸದಿಲ್ಲಿಯಲ್ಲಿ ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿದರು. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಹರ್ದೀಪ್‌ಸಿಂಗ್ ಪುರಿ, ಡಿಪಿಐಐಟಿ ಕಾರ್ಯದರ್ಶಿ ಗುರುಪ್ರಸಾದ್ ಮೊಹಾಪಾತ್ರ ಪಾಲ್ಗೊಂಡಿದ್ದರು. ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರಥಮ, ಉತ್ತರಪ್ರದೇಶ ದ್ವಿತೀಯ ಮತ್ತು ತೆಲಂಗಾಣ ತೃತೀಯ ಸ್ಥಾನ ಪಡೆದಿದೆ.

ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಕ್ರಮವಾಗಿ 4ರಿಂದ 10ರವರೆಗಿನ ಸ್ಥಾನ ಪಡೆದಿದೆ. ವ್ಯಾಪಾರ ಸುಧಾರಣೆ ಕ್ರಿಯಾ ಯೋಜನೆಯ ಸಮರ್ಪಕ ಜಾರಿ, ನಿರ್ಮಾಣ ಪರವಾನಿಗೆ, ಕಾರ್ಮಿಕರ ನಿಯಂತ್ರಣ, ಪರಿಸರ ನೋಂದಣಿ, ಮಾಹಿತಿ ಅವಕಾಶ, ಜಮೀನಿನ ಲಭ್ಯತೆ, ಏಕ ಗವಾಕ್ಷಿ ವ್ಯವಸ್ಥೆ- ಈ ಮಾನದಂಡಗಳ ಆಧಾರದಲ್ಲಿ ಶ್ರೇಯಾಂಕ ಪಟ್ಟಿ ರೂಪಿಸಲಾಗಿದೆ.

 ವಿಶ್ವಬ್ಯಾಂಕ್‌ನ ಉದ್ಯಮಸ್ನೇಹಿ ವಾತಾವರಣವಿರುವ ದೇಶಗಳ ಪಟ್ಟಿಯಲ್ಲಿ ಭಾರತ 2014ರಲ್ಲಿ 142ನೇ ಸ್ಥಾನದಲ್ಲಿದ್ದರೆ 2019ರಲ್ಲಿ 63ನೇ ಸ್ಥಾನಕ್ಕೆ ಮೇಲೇರಿದೆ. ಈಗ ಬಿಡುಗಡೆಯಾಗಿರುವ ಉದ್ಯಮಸ್ನೇಹೀ ರಾಜ್ಯಗಳ ಪಟ್ಟಿಯು, ನಾವು ಯಾವ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕಿದೆ ಎಂಬುದನ್ನು ಗುರುತಿಸುತ್ತದೆ. ಜಾಗತಿಕವಾಗಿ ನಮ್ಮ ಸಾಧನೆ ಹೆಚ್ಚಿಸಲು ಇದು ಪೂರಕವಾಗಲಿದೆ ಎಂದು ಸಚಿವ ಗೋಯಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News