ಅತ್ಯಾಚಾರ ಪ್ರಕರಣ: ಡೆಹ್ರಾಡೂನ್ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್
ಡೆಹ್ರಾಡೂನ್, ಸೆ.6: ಮಹಿಳೆಯೊಬ್ಬರು ಆಗಸ್ಟ್ 16 ರಂದು ನೀಡಿರುವ ದೂರಿನ ಮೇರೆಗೆ ಡೆಹ್ರಾಡೂನ್ ಪೊಲೀಸರು ರವಿವಾರ ಬಿಜೆಪಿ ಶಾಸಕ ಮಹೇಶ್ ಸಿಂಗ್ ನೇಗಿ ವಿರುದ್ಧ ರೇಪ್ ಹಾಗೂ ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಶಾಸಕನ ಪತ್ನಿಯ ಹೆಸರನ್ನೂ ಪ್ರಕರಣದಲ್ಲಿ ನಮೂದಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದರು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 376(ಅತ್ಯಾಚಾರ) ಹಾಗೂ 506(ಕ್ರಿಮಿನಲ್ ಬೆದರಿಕೆ)ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಶಾಸಕನ ವಿರುದ್ಧ ಮಹಿಳೆಯ ದೂರು ದಾಖಲಿಸಿಕೊಳ್ಳುವಂತೆ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮಹಿಳೆಯು ಹೆಚ್ಚುವರಿ ಜ್ಯುಡಿಶಿಯಲ್ ಮ್ಯಾಜಿಸ್ಟೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದ್ವರಹತ್ ಶಾಸಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಆತನೊಂದಿಗೆ ಸಂಬಂಧ ಇರುವುದನ್ನು ಖಚಿತಪಡಿಸಲು ಡಿಎನ್‌ಎ ಪರೀಕ್ಷೆ ನಡೆಸಬೇಕೆಂದು ಬೇಡಿಕೆ ಇಟ್ಟಿದ್ದರು.