ಬಾಲಕಿಯ ಫೋಟೊ ಪೋಸ್ಟ್ ಮಾಡಿ ಆನ್ ಲೈನ್ ಕಿರುಕುಳ ಆರೋಪ: Altnews ಸಹಸಂಸ್ಥಾಪಕನ ವಿರುದ್ಧ ಪ್ರಕರಣ

Update: 2020-09-06 09:32 GMT

ಹೊಸದಿಲ್ಲಿ: ಬಾಲಕಿಯೊಬ್ಬಳಿಗೆ ಆನ್ ಲೈನ್ ನಲ್ಲಿ ಕಿರುಕುಳ ನೀಡಿದ್ದಾರೆ ಎಂಬ ಆರೋಪದಲ್ಲಿ ಆಲ್ಟ್‍ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್ ವಿರುದ್ಧ ಪೋಕ್ಸೊ ಕಾಯ್ದೆ ಅನ್ವಯ ದೆಹಲಿ ಹಾಗೂ ರಾಯಪುರದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

 ಇಬ್ಬರು ಟ್ವಿಟರ್ ಬಳಕೆದಾರರನ್ನೂ ಎಫ್‍ಐಆರ್‍ ನಲ್ಲಿ ಹೆಸರಿಸಲಾಗಿದೆ ಎಂದು ಎನ್‍ ಸಿಪಿಸಿಆರ್ ಅಧ್ಯಕ್ಷೆ ಪ್ರಿಯಾಂಕಾ ಕನೂಂಗೊ ಹೇಳಿದ್ದಾರೆ. ಈ ಇಬ್ಬರ ಬಗ್ಗೆ ಮಾಹಿತಿ ನೀಡಲು ಟ್ವಿಟರ್ ಇಂಡಿಯಾಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಟ್ವಿಟರ್ ಪ್ರತಿನಿಧಿ ಈಗಾಗಲೇ ಆಯೋಗದ ಮುಂದೆ ಶುಕ್ರವಾರ ಹಾಜರಾಗಿದ್ದಾರೆ.

ಆಗಸ್ಟ್ 6ರಂದು ಝುಬೈರ್ ಟ್ವಿಟ್ಟರ್ ಬಳಕೆದಾರರೊಬ್ಬರ ಜತೆ ಆನ್ ಲೈನ್ ವಾಗ್ವಾದದ ವೇಳೇ ಮುಖ ಮಬ್ಬಾಗಿಸಿ ಬಾಲಕಿಯ ಫೊಟೊ ಟ್ವೀಟ್ ಮಾಡಿದ್ದರು. ಝುಬೈರ್ ಟ್ವೀಟ್ ಗೆ ಆನ್ ಲೈನ್‍ ನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಆಗಸ್ಟ್ 8ರಂದು ಫೋರಂ ಫಾರ್ ಇಂಡೀಜೀನಿಯಸ್ ರೈಟ್ಸ್ ನಾರ್ಥ್ ಈಸ್ಟ್ ಇಂಡಿಯಾ ನೀಡಿದ ದೂರಿನ ಮೇಲೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ ಕ್ರಮಕ್ಕೆ ಮುಂದಾಗಿತ್ತು. ದೆಹಲಿ ಡಿಸಿಪಿ ಹಾಗೂ ನೋಡಲ್ ಸೈಬರ್ ಸೆಲ್ ಅಧಿಕಾರಿಗೆ ಈ ಬಗ್ಗೆ ಪತ್ರ ಬರೆದು ಝುಬೈರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News