ಉತ್ತರ ಪ್ರದೇಶ: ಮಾಜಿ ಶಾಸಕನನ್ನು ಥಳಿಸಿ ಕೊಂದ ದುಷ್ಕರ್ಮಿಗಳು

Update: 2020-09-06 14:16 GMT

ಲಕ್ನೋ,ಸೆ.6: ಲಖಿಮ್‌ಪುರ ಖೇರಿಯಲ್ಲಿ ಭೂವಿವಾದಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಗುಂಪೊಂದು ರವಿವಾರ ಮಾಜಿ ಶಾಸಕ ನಿರ್ವೇಂದ್ರ ಕುಮಾರ್ ಮಿಶ್ರಾ ಅವರನ್ನು ದೊಣ್ಣೆಗಳಿಂದ ಥಳಿಸಿ ಹತ್ಯೆ ಮಾಡಿದೆ. ಮಿಶ್ರಾ ಅವರು ಮೂರು ಬಾರಿ ಪಾಲಿಯಾದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

  ಬೆಳಿಗ್ಗೆ ತ್ರಿಕೋಲಿಯಾ ಬಸ್ ನಿಲ್ದಾಣದ ಬಳಿ ಭೂವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಬಳಿಕ ಗುಂಪು ಕಟ್ಟಿಕೊಂಡು ಬಂದಿದ್ದ ದುಷ್ಕರ್ಮಿಗಳು ಮಿಶ್ರಾರನ್ನು ಮತ್ತು ಅವರ ಪುತ್ರ ಸಂಜೀವರನ್ನು ದೊಣ್ಣೆಗಳಿಂದ ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮಿಶ್ರಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಬಳಿಕ ಮಿಶ್ರಾರ ಸಾವಿನಿಂದಾಗಿ ಆಕ್ರೋಶಿತ ಸ್ಥಳೀಯರು ಪೊಲೀಸ್ ಠಾಣೆಯ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಿದರು.

  ತಳ್ಳಾಟದಲ್ಲಿ ಮಿಶ್ರಾ ಅವರು ಕೆಳಕ್ಕೆ ಬಿದ್ದಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಬಿದ್ದು ಉಂಟಾದ ಗಾಯಗಳಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಮಿಶ್ರಾ ದಾಳಿಯಿಂದ ಮೃತಪಟ್ಟಿದ್ದೋ ಅಥವಾ ಬಿದ್ದು ಮೃತಪಟ್ಟಿದ್ದೋ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಬಯಲಾಗಲಿದೆ.

ಮಿಶ್ರಾ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ ಕುಮಾರ ಲಲ್ಲು,ಶಾಸಕ ಹಾಗೂ ಸುಹೇಲದೇವ ಭಾರತೀಯ ಸಮಾಜ ಪಾರ್ಟಿಯ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ ರಾಜಭರ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಯೋಗಿ ಆದಿತ್ಯನಾಥ ಸರಕಾರದ ವಿರುದ್ಧ ದಾಳಿ ನಡೆಸಿ,ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News