ಉ.ಪ್ರ.: ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ಧತಾ ಸಮಿತಿಗಳಲ್ಲಿ 'ಬಂಡಾಯದ ಬಾವುಟ' ಹಾರಿಸಿದವರಿಗೆ ಸ್ಥಾನವಿಲ್ಲ

Update: 2020-09-07 06:43 GMT

ಹೊಸದಿಲ್ಲಿ : ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ  ವಿಧಾನಸಭಾ ಚುನಾವಣೆಗಳಿಗೆ ಪೂರ್ವಭಾವಿ ತಯಾರಿಗಾಗಿ ಕಾಂಗ್ರೆಸ್ ಘೋಷಿಸಿರುವ ಏಳು ಸಮಿತಿಗಳಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದಾರೆಂದು ಈ ಹಿಂದೆ ತಿಳಿಯಲಾಗಿದ್ದ ನಾಯಕರಿಗೆ ಯಾವುದೇ ಸ್ಥಾನ ನೀಡಲಾಗಿಲ್ಲ. ಪಕ್ಷಕ್ಕೆ ಪೂರ್ಣಕಾಲಿಕ ನಾಯಕತ್ವ ಹಾಗೂ ಪಕ್ಷ ಸಂಘಟನೆಯಲ್ಲಿ ಅಮೂಲಾಗ್ರ ಬದಲಾವಣೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಇತ್ತೀಚೆಗೆ  ಬರೆದ ಪತ್ರಕ್ಕೆ  ಸಹಿ ಹಾಕಿದ ನಾಯಕರುಗಳ ಪೈಕಿ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ, ಉತ್ತರ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜ್ ಬಬ್ಬರ್ ಹಾಗೂ ಎಐಸಿಸಿ ಜಾರ್ಖಂಡ್ ಉಸ್ತುವಾರಿ ಆರ್‍ಪಿಎನ್ ಸಿಂಗ್ ಅವರನ್ನು  ಈ ಸಮಿತಿಗಳಲ್ಲಿ ಸೇರಿಸಲಾಗಿಲ್ಲ.

ಪತ್ರವನ್ನು ಖಂಡಿಸಿ ಹೇಳಿಕೆ ನೀಡಿದ್ದ  ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ನಿರ್ಮಲ್ ಖತ್ರಿ ಹಾಗೂ ಪಕ್ಷ ನಾಯಕ ನಸೀಬ್ ಪಠಾನ್ ಅವರಿಗೆ  ಸಮಿತಿಗಳಲ್ಲಿ ಸ್ಥಾನ ದೊರಕಿದೆ. ಖತ್ರಿ ಅವರು ತರಬೇತಿ ಮತ್ತು  ಕಾರ್ಯಕರ್ತರ ಅಭಿವೃದ್ಧಿ ಸಮಿತಿಯ ಭಾಗವಾಗಲಿದ್ದರೆ ಪಠಾನ್ ಅವರು ಕಾರ್ಯಕ್ರಮ  ಜಾರಿ ಸಮಿತಿಯಲ್ಲಿರಲಿದ್ದಾರೆ.

ಪ್ರಮೊದ್ ತಿವಾರಿ ಹಾಗೂ ಎಐಸಿಸಿ ಉತ್ತರಾಖಂಡ ಉಸ್ತುವಾರಿ ಅನುಗ್ರಹ್ ನಾರಾಯಣ್ ಸಿಂಗ್ ಅವರು ಕೂಡ ವಿವಿಧ ಸಮಿತಿಗಳ ಅಧ್ಯಕ್ಷತೆ ವಹಿಸಲಿದ್ದು ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ತಂಡದ ನೇತೃತ್ವವನ್ನು ಹಿರಿಯ ನಾಯಕ ಸಲ್ಮಾನ್ ಖುರ್ಷೀದ್ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News