ಸಹಜ ಸೋಜಿಗದ ತೇಜಸ್ವಿ

Update: 2020-09-07 19:30 GMT

ನನ್ನನ್ನು ಆಳವಾಗಿ ಕಲಕಿ ಗುಂಗಿನಂತೆ, ವಿಲಕ್ಷಣ ಜ್ವರದಂತೆ ಕಾಡಿದ ‘ನಿಗೂಢ ಮನುಷ್ಯರು’ ಕಥೆಯನ್ನು ದಯಪಾಲಿಸಿದ 1974ರ ಇಸವಿಯ ‘ಕಸ್ತೂರಿ’ ವಸಂತ ಸಂಚಿಕೆಯನ್ನು ಓದಿದ ಅಡ್ಡ ಮಳೆಯ ಮಧ್ಯಾಹ್ನ ನನ್ನಲ್ಲಿ ಇನ್ನೂ ಜೀವಂತವಾಗಿದೆ. ಅದರಲ್ಲಿ ಬರುವ ಸ್ತ್ರೀ ಪಾತ್ರದ ಮೌನ ಇನ್ನೂ ಕಿವಿಗೆ ಕೇಳುತ್ತಿದೆ. ಅಂದಾಜು ಅದೇ ಸುಮಾರಿಗೆ ‘ತುಷಾರ’ ಪತ್ರಿಕೆ ಶುರುವಾಗಿತ್ತು ಮತ್ತು ಅದರಲ್ಲಿ ಮುದ್ದಾದ ಛಾಯಾಚಿತ್ರಗಳ ಗುಚ್ಛವೊಂದು ಪುಟಾಣಿ ಬರಹದೊಂದಿಗೆ ಬರುತ್ತಿತ್ತು. ಪ್ರತಿ ಸಂಚಿಕೆಯನ್ನು ನಾವೆಲ್ಲ ಕಾಯುತ್ತಿದ್ದುದೇ ಆ ಚಿತ್ರ-ಲೇಖನ ಗುಚ್ಛಕ್ಕಾಗಿ. ಆ ಗುಚ್ಛದಲ್ಲೊಂದು ಅಲೌಕಿಕ ಕಾಂತಿ ಇತ್ತು. ಬಣ್ಣ ಬದಲಿಸುತ್ತಿರುವ ಕೀಟ, ಕೋಶ ನೀಗಿಸಿಕೊಳ್ಳುವ ಚಿಟ್ಟೆ, ಎಲೆಯೇ ಚಲಿಸುವಂತೆ ಭಾಸವಾಗುವ ಹಸಿರು ಪತಂಗ -ಇವುಗಳು ವರ್ಣನೆಯಲ್ಲೂ ಅತ್ಯಂತ ಕಲ್ಪನಾಶೀಲವಾದ ಮತ್ತು ದೃಶ್ಯಕ್ಕೊಂದು ಅಪೂರ್ವ ಅದೃಶ್ಯವನ್ನು ಜೋಡಿಸುವ ನಿಖರ ಶಕ್ತಿಯಿತ್ತು. ‘ಸ್ವೆಟರ್ ಹಾಕಿಕೊಂಡ ಹುಳ’, ‘ಕೇಸರಿ ಟೊಪ್ಪಿಗೆಯ ಹೂವಿನಂಥ ಚುಂಚಿನ..’ ಇತ್ಯಾದಿ ‘ನಿಗೂಢ ಮನುಷ್ಯ’ ಹುಟ್ಟಿಸಿದ ಮೌನಕ್ಕೆ ಹೀಗೆ ಸೋಜಿಗದ ಇತರ ಕಂಪನಗಳು ಸೇರಿಕೊಳ್ಳುತ್ತಾ ಹೋದಂತೆ ‘ತೇಜಸ್ವಿ’ ಎಂಬುದು ಒಂದು ವಿಶಿಷ್ಟ ಸರ್ವಗ್ರಾಹಿ ಸಂವೇದನೆಯಾಗಿ ನನ್ನನ್ನು ಪೋಷಿಸತೊಡಗಿತು. ಅವರ ಉತ್ತರ ಕರ್ನಾಟಕದ ಬೆಣಚುಕಲ್ಲು ಊರಿನ ದಾರುಣ ಚಿತ್ರ ಸರಣಿಯಂತೂ ನನ್ನ ವಾರಿಗೆಯವರನ್ನೆಲ್ಲ ಈಗಲೂ ದುಸ್ವಪ್ನದಂತೆ ಕಾಡುತ್ತಿದೆ.

ಆಗಲೇ ‘ನನ್ನಂತೆ ವಾರೆ ಬೈತಲೆ ತೆಗೆದ ನೀನು ಯಾರೆ’ ಪದ್ಯ ಅವರೇ ಬರೆದಿದ್ದು ಎಂದು ತಿಳಿದು ತುಂಬಾ ಖುಷಿಯಾಯಿತು. ಏಕೆಂದರೆ ‘ಕರ್ವಾಲೋ’ ಓದುವ ತನಕ ತೇಜಸ್ವಿ ಮಹಾಗಂಭೀರ ಎಂಬ ಭಯ ಕಾಡುತ್ತಿತ್ತು. ಆದರೆ ಮಂದಣ್ಣ ಸಾಹಸಗಾಥೆ, ‘ತನ್ನ ಸ್ವಾಭಿಮಾನವನ್ನೂ ಮರೆತು ಗರಂ ಮಸಾಲೆ ವಾಸನೆಗೆ ಬಾಲ ಅಲ್ಲಾಡಿಸುತ್ತಾ ಹೋದ ನಾಯಿ ಕಿವಿ’ಗಳನ್ನು ಓದಿದ್ದೇ ಅಪ್ಪಟ ಒಂದು ಹೊಸ ವಿನೋದದ ದೃಷ್ಟಿದಾನ ನಮಗಾಯಿತು. ‘ಡೇರ್ ಡೆವಿಲ್ ಮುಸ್ತಫಾ’, ‘ತುಕ್ಕೋಜಿ’ ಇವರೆಲ್ಲ ನಮ್ಮ ಊರಿನ, ಕೇರಿಯ ಮನೆಯ ಮಂದಿಯಾದರು. ಜೀವಲೋಕದ ಬೆರಗನ್ನೆಲ್ಲ ಅನುಭವಿಸುತ್ತಲೇ ನಮಗೆ ಕಾಣಿಸಿದ ಈ ವ್ಯಕ್ತಿಯ ಬಗ್ಗೂ ಅಂಥದ್ದೇ ಬೆರಗು. ಎಲ್ಲ ಬಗೆಯ ರೂಢಿಗತ ಮಾದರಿಗಳನ್ನು ಹಠದಿಂದಲೇ ಮುರಿದು, ಎಲ್ಲ ಚೇಷ್ಟೆ, ಚಿಂತನೆ, ಕಳಕಳಿ, ವ್ಯಾಮೋಹಗಳ ಜತೆ ತನ್ನ ಆಳದ ಸಹಜ ಜಾಗೃತ ಮೌನವನ್ನು ಅಪಾರ ತಿಳಿವಿನಲ್ಲಿ ವಿಕಸನಗೊಳಿಸಿಕೊಂಡು ಬಂದ ಈ ಆಕರ್ಷಕ ವ್ಯಕ್ತಿಯ ಆರಾಧಕನಾಗಿದ್ದ ನಾನು ಅವರನ್ನು ಕಂಡಿದ್ದೂ ಎಂಬತ್ತರ ದಶಕದ ಜಾಗೃತ ಸಮ್ಮೇಳನದಲ್ಲಿ. ಆಗ ಅವರನ್ನು ಮಾತನಾಡಿಸಿದಾಗ ಅವರು ಮಾತನಾಡಿದ್ದು ಕಾಲಿನ ಹಿಮ್ಮಡಿ ನೋವಿಗೆ ಉಪಶಮನ ಕೊಡುವಂಥ ಒಂದು ‘ಪ್ರಭಾವಶಾಲಿ ಸಸ್ಯದ ಎಲೆಗಳ ಬಗ್ಗೆ’ ಅಷ್ಟೇ.

ನಂತರದ ಅವರ ಭೇಟಿ ನಾಲ್ಕು ವರ್ಷಗಳ ಹಿಂದೆ ‘ಈ ಟಿವಿ’ಗಾಗಿ ನಾನು ‘ನಮಸ್ಕಾರ’ ಸಂದರ್ಶನ ಮಾಲಿಕೆಗಾಗಿ ಅವರನ್ನು ಸಂದರ್ಶಿಸಿದಾಗ. ನನಗೋ ವಿಪರೀತ ಭಯ (ಇಂಥ ಭಯ ಒಂದೊಂದು ಸಲ ಭಕ್ತಿಯನ್ನೂ ನುಂಗಿ ಹಾಕಿ ನಮ್ಮನ್ನು ಮಂಗನನ್ನಾಗಿ ಮಾಡುತ್ತದೆ) ಆದರೂ ಅದಾಗಲೇ ಬಂದು ನಿಂತು ಹೋಗಿದ್ದ ‘ಭಾವನಾ’ ಪತ್ರಿಕೆಯ ಬಗ್ಗೆ ಅವರಿಗೆ ತುಂಬಾ ಮೆಚ್ಚುಗೆಯಿತ್ತು ಮತ್ತು ಆ ಕುರಿತು ಅವರು ತಮ್ಮ ಬಳಿ ಬಂದವರಿಗೆಲ್ಲ ಹೇಳುತ್ತಿದ್ದರು ಎಂಬುದು ನನಗೆ ಎಲ್ಲೆಲ್ಲಿಂದಲೂ ತಿಳಿದು ಬಂದಿದ್ದರಿಂದ, ನನ್ನನ್ನು ವಾಪಸ್ ಕಳಿಸಲಿಕ್ಕಿಲ್ಲ ಎಂಬ ಹುಂಬ ಧೈರ್ಯದಿಂದಲೇ ಹೋದೆ. ‘‘ನಿನ್ನ ಪ್ರಕಾಶಕರು ಒಂದೆರಡು ವರ್ಷ ತಾಳ್ಮೆ ವಹಿಸಿದ್ದರೆ ಯು ಕುಡ್ ಹ್ಯಾವ್ ಕ್ರಿಯೇಟೆಡ್ ಎ ನ್ಯೂ ಇಂಟಿಮೇಟ್ ಸ್ಕೂಲ್ ಆಫ್ ಹೋಲಿಸ್ಟಿಕ್ ಸೆನ್ಸಿಬಿಲಿಟಿ’’ ಎಂದರು. ಪತ್ರಿಕೆ ನಿಂತಿದ್ದೇ ಸಾರ್ಥಕವಾಯಿತು ಎಂದೆನಿಸಿಬಿಟ್ಟಿತು! ಸತ್ಯಮೂರ್ತಿ ಆನಂದೂರು ಜತೆ ಅವರನ್ನು ಸ್ಟುಡಿಯೋಗೆ ಕರೆದುಕೊಂಡು ಬಂದಾಗ ‘‘ಏನು ಕರ್ಮಾನೋ ನಿಮ್ದು. ಮಾಡ್ಕೊಂಡ್ ಹೋಗಿ ಅತ್ಲಾಗೆ’’ ಎಂದು ಗೊಣಗುತ್ತಿದ್ದರು. ಸ್ಟುಡಿಯೋ ಸಮೀಪಿಸುತ್ತಿದ್ದಂತೆ ನನ್ನನ್ನು ನಿಲ್ಲಿಸಿ ಹೆಗಲ ಮೇಲೆ ಕೈಯಿಟ್ಟು ‘‘ನೋಡು ಮಾರಾಯ. ನೀನೇನಾದ್ರೂ ನನಗೆ ಲಿಪ್‌ಸ್ಟಿಕ್ಕು ಗಿಪ್‌ಸ್ಟಿಕ್ಕು ಹಚ್ಚಿದ್ರೆ ಕಾಲು ಮುರಿದ್ಹಾಕಿ ಬಿಡ್ತೀನಿ ನಿಂದು’’ ಎಂದರು. ನಂತರ ವಾಡಿಕೆಯಂತೆ ನಾನು ಸ್ಟೂಡಿಯೋದವರು ಕೊಟ್ಟ ಒಂದು ಕ್ಲೋಸ್ ಕಾಲರ್ ಕೋಟು ಹಾಕಿಕೊಂಡು ಭಾರೀ ಮುಜುಗರದಲ್ಲಿ ತಯಾರಾದಾಗ ತುಂಬಾ ಅನುಕಂಪದಿಂದಲೇ ‘‘ಏನು ಫಜೀತಿಯೋ ಮಾರಾಯ ನಿಂದು’’ ಎಂದು ಮುಗುಳು ನಕ್ಕರು. ಅಂತೂ ಮೊದಲ ಬಾರಿಗೆ ಟೆಲಿವಿಷನ್‌ನಲ್ಲಿ ಅವರನ್ನು ಸಂದರ್ಶಿಸುವ ಅವಕಾಶ ನನ್ನದಾಯಿತು.

ನಂತರ ಫೋನಿನಲ್ಲಿ ಆಗಾಗ ಅವರ ಜೊತೆ ಮಾತನಾಡಿದೆ. ಚಿತ್ರಕಲಾ ಪರಿಷತ್ತಿನಲ್ಲಿ ಒಮ್ಮೆ ಅವರ ಹಕ್ಕಿಗಳ ಚಿತ್ರ ಪ್ರದರ್ಶನದ ಏರ್ಪಾಟಾಗಿ, ಅವರ ಬಹಿರಂಗ ಸಂವಾದವೂ ಇತ್ತು. ಅದನ್ನು ನಡೆಸಿಕೊಡುವ ‘ವಿರೂಪಕ’ ನಾನಾಗಿದ್ದೆ. ಪ್ರೇಕ್ಷಕರಿಂದ ಬಂದ ಪ್ರಶ್ನೆಗಳ ಚೀಟಿಯನ್ನು ಹೊಂದಿಸಿಕೊಳ್ಳುತ್ತಾ ಪ್ರಶ್ನೆ ಕೇಳುತ್ತಿದ್ದೆ. ಪ್ರಶ್ನೆ ಕೇಳಿದ ನಂತರ ಅವರು ಉತ್ತರಿಸುವಾಗ ಮುಂದೆ ಕೇಳುವ ಪ್ರಶ್ನೆಗಳಿಗಾಗಿ ಚೀಟಿಗಳನ್ನು ನೋಡುತ್ತಿದ್ದೆ. ಅವರು ತಮ್ಮ ಮಾತು ನಿಲ್ಲಿಸಿ ಈ ಮಹಾನಿರತನಾಗಿದ್ದ ನನ್ನೆಡೆ ನೋಡಿ ‘‘ಏ ಇಲ್ಲಿ ಸ್ವಲ್ಪಕೇಳೋ ಮಾರಾಯ’’ ಎಂದರು. ಇಡೀ ಪ್ರೇಕ್ಷಕ ಗಣ ನಗುವಾಗ ಅವರೂ ಮುದ್ದಾಗಿ ನಕ್ಕರು. ಯಾವುದೋ ಪ್ರಶ್ನೆಗೆ ಉತ್ತರಿಸುತ್ತಾ ನನಗೆ ‘‘ನೀನು ಡಾರ್ಕ್‌ರೂಮಲ್ಲಿ ಯಾವತ್ತಾದರೂ ಕೆಲಸ ಮಾಡಿದೆಯೇನೋ?’’ ಎಂದು ಕೇಳಿದಾಗ, ನಾನು ‘‘ಫೋಟೊಗ್ರಫಿ ಮಾಡಿಲ್ಲ’’ ಎಂದು ಉತ್ತರಿಸಿದಾಗ ಅವರಿಗೆ ಸೂಕ್ಷ್ಮ ಮುಜುಗರವಾಯಿತು. ಆಗಿನ ಅವರ ಐದು ಸೆಕೆಂಡಿನ ಮೌನ ನೋಟದಲ್ಲಿಯೇ ನನ್ನ ಉದ್ಧ್ದಟತನ ನನ್ನ ಅರಿವಿಗೆ ಬಂತು.

ನಂತರ ಸಂಜೆ ‘‘ಕುವೆಂಪು ಕುರಿತು ‘ರಸಋಷಿಗೆ ನಮಸ್ಕಾರ’ ಮಾಡಬೇಕೆಂದಿದ್ದೇನೆ. ನಿಮ್ಮ ಸಹಕಾರ ಬೇಕು’’ ಎಂದು ಕೇಳಿದಾಗ ‘‘ಮಾರಾಯ ಅದನ್ನೆಲ್ಲಾ ತಲೆಗೆ ಸುತ್ಕೋಬೇಡ. ಜನರನ್ನು ಕಟ್ಕೊಂಡು ಕೆಲಸ ಮಾಡೋದು ಕಷ್ಟ. ಬಟ್ ಐಡಿಯಾ ಇಸ್ ಗುಡ್’’ ಎಂದರು.

ಸರಣಿ ಶುರುವಾದಾಗ ‘‘ಎಂತದ್ದು ಮಾರಾಯ ಕಾರ್ಯಕ್ರಮ ನೋಡುವುದಕ್ಕೆ ಡಿಶ್ ಹಾಕಿಸಿಕೊಳ್ಳುವ ಫಜೀತಿ ಬಂತಲ್ಲೋ’’ ಎಂದು ಫೋನ್ ಮಾಡಿದವರು ‘‘ಈಶಾನ್ಯೆ ಸಂದರ್ಶನ ಚೆನ್ನಾಗಿತ್ತು. ನಿನಗೆ ಕೋಟಿನ ಶಾಪ ವಿಮೋಚನೆ ಆಗಿದ್ದು ನೋಡಿ ಸಮಾಧಾನ ಆಯ್ತು’’ ಎಂದರು. ಜೊತೆಗೆ ‘‘ನಾನು ಕುವೆಂಪು ಅಭಿಮಾನಿ, ನಾನು ಮಾತಾಡ್ತೀನಿ ಅಂತ ನಿನ್ನ ತಲೆ ತಿನ್ನೋಕೆ ಯಾರಾರ ಬಂದ್ರೆ ಎನ್‌ಕರೇಜ್ ಮಾಡಬೇಡ’’ ಎಂದು ಎಚ್ಚರಿಸಿದರು. ಈ ಸರಣಿಯ ಸಮಾರೋಪ ಸಂಚಿಕೆಗಾಗಿ ಇವರೇ ಕುಪ್ಪಳಿಗೆ ಪತ್ನಿ ರಾಜೇಶ್ವರಿ ಮತ್ತು ಬಂಧು ಕಡಿದಾಳ ಶಾಮಣ್ಣ ಅವರ ಜೊತೆ ಬಂದು ಇಡೀ ದಿನ ಇದ್ದು ಪ್ರೀತಿಯಿಂದ ಪಾಲ್ಗೊಂಡರು. ಮಧ್ಯಾಹ್ನ ಕೂತಲ್ಲೇ ಅಡ್ಡಾಗಿ ಐದು ನಿಮಿಷ ನಿದ್ರಿಸಿದರು. ತಲ್ಲೀನರಾಗಿ ಏನಾದರೂ ಹೇಳುವಾಗ ನಡು ನಡುವೆ ನನ್ನನ್ನು ಅವರು ‘ಗೌರೀಶ್’ ‘ಗೌರೀಶ್’ ಅಂತ ಸಂಬೋಧಿಸುತ್ತಿದ್ದರು. ನನಗೆ ಅದು ತುಂಬಾ ಅಪ್ಯಾಯಮಾನವಾಗಿ ಕೇಳಿಸುತ್ತಿತ್ತು. ಏಕೆಂದರೆ ನಾನು ಆರಾಧಿಸುವ ಈ ನನ್ನ ಹೀರೋನ ಮನಸ್ಸಿನಲ್ಲಿ ನನ್ನ ತಂದೆಯ ಹೆಸರೂ ಉಳಿದಿದೆಯಲ್ಲ! ಎಂದು.

ನನ್ನ ಅತಿ ಅಮೂಲ್ಯ ಕ್ಷಣ ನನಗೆ ಒದಗಿದ್ದು ಹೋದ ವರ್ಷ ಬಸವನಗುಡಿಯಲ್ಲಿ ನನ್ನ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ!. ಕಾರ್ಯಕ್ರಮ ನಡೆಯುತ್ತಿದ್ದ ಹಾಗೆ ಪ್ರೇಕ್ಷಕರ ಹಿಂಭಾಗದ ಸಾಲಿನಲ್ಲಿ ತುಸು ಹಲ್‌ಚಲ್ ಆಯಿತು. ಜನ ಸ್ವಲ್ಪಮಿಸುಕಾಡಿದರು. ಏನು ಅಂತ ನೋಡಿದರೆ ಅಲ್ಲಿ ತೇಜಸ್ವಿ ದಂಪತಿ ಪ್ರೇಕ್ಷಕರಾಗಿ ಪ್ರತ್ಯಕ್ಷ! ಬೆಂಗಳೂರಿನ ಮಗಳ ಮನೆಯಲ್ಲಿ ಬಂದು ಉಳಿದುಕೊಂಡಿದ್ದವರು, ಪತ್ರಿಕೆಯಲ್ಲಿ ‘ನಗರದಲ್ಲಿ ಇಂದು’ ಯಾದಿಯಲ್ಲಿ ಈ ಕಾರ್ಯಕ್ರಮದ ಕುರಿತು ಓದಿ, ಬಂದಿದ್ದರು! ಇಷ್ಟೇ ಅಲ್ಲ, ತಪ್ಪಾಗಿ ಹಿಂದಿನ ದಿನವೇ ಬಂದು ಖಾಲಿ ಸಭಾಂಗಣ ನೋಡಿ ಮರಳಿ ಹೋಗಿದ್ದರಂತೆ. ಪೌರಾಣಿಕ ನಾಟಕದಲ್ಲಿ ದೇವರು ಪ್ರತ್ಯಕ್ಷವಾಗಿದ್ದು ನೋಡಿದ್ದೇನೆ. ನನಗಂತೂ ಶಿವಪ್ರಕಾಶರ ‘‘ಚಿಕ್ಕಪೇಟೆ ಚೌಕದಲ್ಲಿ ನವಿಲು ಬಂದಿಳಿದಂಥ’’ ಅನುಭವವಾಯಿತು. ನಾನು ವೇದಿಕೆಗೆ ಕರೆದಾಗ ಅದೇ ಸೌಜನ್ಯದಲ್ಲಿ ಇಲ್ಲವೆನ್ನಲಾಗದೆ ಬಂದು ‘‘ಆತ್ಮವಿಮರ್ಶೆ ಇಲ್ಲದೆ ಯಾರೂ ಬೆಳೆಯಲಾರರು’’ ಎಂದು ಎಚ್ಚರದ ಎರಡು ನುಡಿಗಳನ್ನಾಡಿದರು.

ಅವರ ಸರ್ವಗ್ರಾಹಿ ಸಂವೇದನೆಯ, ಅಲೌಕಿಕಕ್ಕಾಗಿನ ತುಡಿತದ, ಕಳಕಳಿಯ ಕಣ್ಣಿನ ಮಿಂಚಿಗೆ ನಮಸ್ಕಾರ. ತೊಡೆಯ ಬಳಿ ತುಸು ಹರಿದಿದ್ದ ಜೀನ್ಸ್ ಪ್ಯಾಂಟಿನ, ನೀಲಿ ಶರ್ಟ್‌ನ, ಮುದ್ದಾದ ಪಕ್ವ ನಗುವಿನ ಈ ಸಹಜ ಸೋಜಿಗದ ಅಪ್ಪಟ ಮನುಷ್ಯನಿಗೆ ಧನ್ಯವಾದ.

(‘ಗುಲ್‌ಮೊಹರ್’ ಕೃತಿಯಿಂದ)

Writer - ಜಯಂತ್ ಕಾಯ್ಕಿಣಿ

contributor

Editor - ಜಯಂತ್ ಕಾಯ್ಕಿಣಿ

contributor

Similar News