×
Ad

ಹತ್ತರ ಬಾಲಕಿಯನ್ನು ಕೊಂದ 11ರ ಬಾಲಕ !

Update: 2020-09-08 10:45 IST

ಇಂಧೋರ್: ನೆಚ್ಚಿನ ಇಲಿಯನ್ನು ಕೊಂದ ಶಂಕೆಯಿಂದ 10 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ 11 ವರ್ಷದ ಬಾಲಕನೊಬ್ಬನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಗೇಮ್‌ನಲ್ಲಿ ಬಾಲಕಿ ತನ್ನನ್ನು ಸೋಲಿಸಿದ್ದಾಳೆ ಎಂಬ ಕೋಪ ಕೂಡಾ ಬಾಲಕನಿಗೆ ಇತ್ತು ಎಂದು ಹೇಳಲಾಗಿದೆ. ಲಸೂದಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಐದನೇ ತರಗತಿಯ ವಿದ್ಯಾರ್ಥಿನಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾನೆ ಎಂದು ಡಿಐಜಿ ಎಚ್.ಸಿ.ಮಿಶ್ರಾ ಹೇಳಿದ್ದಾರೆ. ಸಂತ್ರಸ್ತೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಳು.

ತಾನು ಸಾಕಿದ ಇಲಿಯನ್ನು ಬಾಲಕಿ ವಾಗ್ವಾದದ ಬಳಿಕ ಕೊಂದದ್ದಕ್ಕೆ ಪ್ರತೀಕಾರವಾಗಿ ಬಾಲಕಿಯನ್ನು ಕೊಂದಿದ್ದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಪ್ರಕರಣದ ತನಿಖೆ ಮುಗಿದ ಬಳಿಕ ಬಾಲಕನನ್ನು ಸುಧಾರಣಾ ಗೃಹಕ್ಕೆ ಕಳುಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಬಾಲಕಿಯನ್ನು ಸಾಯಿಸುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಸಾಧ್ಯತೆಯನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗೆ ಕಾಯುತ್ತಿದ್ದಾರೆ. ಹೂವು ಕೀಳಲು ಹೋದಾಗ ಬಾಲಕಿಯನ್ನು ಹತ್ಯೆ ಮಾಡಲಾಗಿದೆ ಎಂದು ಬಾಲಕಿಯ ಕುಟುಂಬದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News