ಈಜಿಪ್ಟ್: ಮುರ್ಸಿಯವರ ಪುತ್ರ ಮೃತಪಟ್ಟಿದ್ದು ವಿಷಪ್ರಾಶನದಿಂದ; ಕುಟುಂಬದ ವಕೀಲರ ಆರೋಪ

Update: 2020-09-08 16:21 GMT
 ಪೋಟೊ ಕೃಪೆ: twitter.com

ಕೈರೋ (ಈಜಿಪ್ಟ್), ಸೆ. 8: ಈಜಿಪ್ಟ್‌ನ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರ ಕಿರಿಯ ಪುತ್ರ ‘ಮಾರಕ ವಿಷ ಪದಾರ್ಥ’ ಪ್ರಾಶನದಿಂದಾಗಿ ಮೃತಪಟ್ಟಿದ್ದಾರೆ ಹಾಗೂ ಈ ಮೊದಲು ಅಧಿಕಾರಿಗಳು ಹೇಳಿಕೊಂಡಿರುವಂತೆ ಹೃದಯಾಘಾತದಿಂದಾಗಿ ಅಲ್ಲ ಎನ್ನುವುದನ್ನು ತೋರಿಸುವ ಮಾಹಿತಿಯೊಂದು ಲಭಿಸಿದೆ ಎಂದು ಅವರ ಕುಟುಂಬದ ವಕೀಲರು ಹೇಳಿದ್ದಾರೆ.

25 ವರ್ಷದ ಅಬ್ದುಲ್ಲಾ ಮುರ್ಸಿ ಕಳೆದ ವರ್ಷದ ಸೆಪ್ಟಂಬರ್ 4ರಂದು ಈಜಿಪ್ಟ್ ರಾಜಧಾನಿ ಕೈರೋದ ನೈರುತ್ಯ ಭಾಗದಲ್ಲಿರುವ ಗಿಝ ಎಂಬ ಉಪನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

ಅವರು ಕಾರು ಚಲಾಯಿಸುತ್ತಿದ್ದಾಗ ಅವರು ಅಸ್ವಸ್ಥರಾದರು ಹಾಗೂ ಅವರನ್ನು ತಕ್ಷಣ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು, ಆದರೆ, ವೈದ್ಯರಿಗೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಆ ಸಮಯದ ಸರಕಾರಿ ವರದಿಯೊಂದು ತಿಳಿಸಿದೆ.

ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವ ವಿಧಾನದಿಂದ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿದ್ದ ಮುರ್ಸಿ 2019 ಜೂನ್ 17ರಂದು ಮೃತಪಟ್ಟಿದ್ದಾರೆ.

ಅವರ ಮಗ ಅಬ್ದುಲ್ಲಾರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ಮುರ್ಸಿಯ ಕಾನೂನು ತಂಡ ರವಿವಾರ ತಿಳಿಸಿದೆ.

‘‘ಅವರಿಗೆ ಮಾರಕ ಇಂಜೆಕ್ಷನ್ ನೀಡಿದ ಬಳಿಕ ಅವರು ಸಾವನ್ನಪ್ಪಿದ್ದಾರೆ. ಅವರು ಕೊನೆಯುಸಿರೆಳೆದ ಬಳಿಕ ಅವರನ್ನು 20 ಕಿ.ಮೀ.ಗೂ ಹೆಚ್ಚು ದೂರದ ಆಸ್ಪತ್ರೆಯೊಂದಕ್ಕೆ ಅವರ ಕಾರಿನಲ್ಲಿ ಸಾಗಿಸಲಾಗಿದೆ. ಅವರು ಸಾಯುವವರೆಗೆ ಉದ್ದೇಶಪೂರ್ವಕವಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿಲ್ಲ ಎನ್ನುವುದನ್ನು ಖಚಿತಪಡಿಸುವ ಮಾಹಿತಿ ಲಭಿಸಿದೆ’’ ಎಂದು ಲಂಡನ್‌ನಲ್ಲಿರುವ ಕಾನೂನು ಸಂಸ್ಥೆ ‘ಗೆರ್ನಿಕ 37 ಇಂಟರ್‌ನ್ಯಾಶನಲ್ ಜಸ್ಟೀಸ್ ಚೇಂಬರ್ಸ್’ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News