ಭಾರತದಿಂದ ಗಂಭೀರ ಮಿಲಿಟರಿ ಪ್ರಚೋದನೆ: ಚೀನಾ ಆರೋಪ

Update: 2020-09-08 18:07 GMT

ಹೊಸದಿಲ್ಲಿ,ಸೆ.8: ಗಡಿಯಲ್ಲಿ ಭಾರತವು ‘ಎಚ್ಚರಿಕೆ ಗುಂಡು’ ಹಾರಿಸಿತ್ತು ಮತ್ತು ಅದಕ್ಕೆ ಉತ್ತರಿಸುವುದು ಚೀನಾಕ್ಕೆ ಅನಿವಾರ್ಯವಾಗಿತ್ತು ಎಂದು ಚೀನಿ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು ಬೀಜಿಂಗ್‌ನಲ್ಲಿ ಮಂಗಳವಾರ ಹೇಳಿಕೊಂಡಿದ್ದಾರೆ.

ಭಾರತದ ಕ್ರಮವನ್ನು ಗಂಭೀರ ಮಿಲಿಟರಿ ಪ್ರಚೋದನೆ ಎಂದು ಪರಿಗಣಿಸಲಾಗಿದೆ. ಇದು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹದಗೆಡಿಸಿದೆ ಮತ್ತು ಇದಕ್ಕೆ ಭಾರತವೇ ಸಂಪೂರ್ಣವಾಗಿ ಹೊಣೆಯಾಗಿದೆ ಎಂದು ಹೇಳಿದ ಲಿಜಿಯಾನ್,ಚೀನಾ ತನ್ನ ಒಂದೇ ಒಂದು ಇಂಚು ಭೂಪ್ರದೇಶವನ್ನು ಕಳೆದುಕೊಳ್ಳುವುದಿಲ್ಲ. ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಮಾತುಕತೆಗಳಿಗೆ ನಾವು ಅಂಟಿಕೊಳ್ಳಬೇಕಿದೆ. ಭಾರತವು ತನ್ನ ಯೋಧರಿಗೆ ಶಿಸ್ತು ಕಲಿಸಬೇಕು. ಭಾರತವು ಋಣಾತ್ಮಕ ಮಾಹಿತಿಗಳನ್ನು ಪ್ರಚೋದಿಸಬಾರದು ಮತ್ತು ಹರಡಬಾರದು. ಭಾರತದ ರಕ್ಷಣಾ ಸಚಿವರು ಸಹ ಶಾಂತಿಯನ್ನು ಕಾಯ್ದುಕೊಳ್ಳುವ ತನ್ನ ದೇಶದ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಕಳೆದ ಮೂರು ತಿಂಗಳಿಗೂ ಅಧಿಕ ಸಮಯದಿಂದ ಭಾರತ ಮತ್ತು ಚೀನಿ ಪಡೆಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಗುಂಡು ಹಾರಿಸಿರುವುದನ್ನು ಭಾರತವು ನಿರಾಕರಿಸಿದ ಬಳಿಕ ಚೀನಾದ ಈ ಹೇಳಿಕೆ ಹೊರಬಿದ್ದಿದೆ.

ಗಡಿಯಲ್ಲಿ ಅತ್ಯಂತ ಗಂಭೀರ ಸ್ಥಿತಿ: ಎಸ್.ಜೈಶಂಕರ್

ಪೂರ್ವ ಲಡಾಖ್‌ನಲ್ಲಿ ಅತ್ಯಂತ ಗಂಭೀರ ಸ್ಥಿತಿಯಿದೆ ಮತ್ತು ಇದನ್ನು ಬಗೆಹರಿಸಲು ಉಭಯ ದೇಶಗಳ ನಡುವೆ ರಾಜಕೀಯ ಮಟ್ಟದಲ್ಲಿ ಹೆಚ್ಚಿನ ಮಾತುಕತೆಗಳು ಅಗತ್ಯವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು ಹೇಳಿದ್ದಾರೆ.

ಮಾಸ್ಕೋದಲ್ಲಿ ಚೀನಿ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ತನ್ನ ನಿರೀಕ್ಷಿತ ಮಾತುಕತೆಗಳಿಗೆ ಮುನ್ನ ಸೋಮವಾರ ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಚೀನಾದೊಂದಿಗೆ ಗಡಿಯಲ್ಲಿನ ಸ್ಥಿತಿಯನ್ನು ಆ ದೇಶದೊಂದಿಗಿನ ಒಟ್ಟಾರೆ ಸಂಬಂಧದ ಸ್ಥಿತಿಯಿಂದ ಪ್ರತ್ಯೇಕಗೊಳಿಸುವಂತಿಲ್ಲ. ಗಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆಗಳು ಸಂಭವಿಸುವ ಮುನ್ನವೇ ತಾನಿದನ್ನು ಬರೆದಿದ್ದೆ ಎಂದು ತನ್ನ ಹೊಸ ಪುಸ್ತಕ ‘ದಿ ಇಂಡಿಯಾ ವೇ ’ಅನ್ನು ಪ್ರಸ್ತಾಪಿಸಿ ಹೇಳಿದರು.

ಮಂಗಳವಾರ ಬೆಳಿಗ್ಗೆ ಮಾಸ್ಕೋಕ್ಕೆ ಪ್ರಯಾಣಿಸಿರುವ ಜೈಶಂಕರ ಅವರು ಸೆ.10ರಂದು ಅಲ್ಲಿ ಎಂಟು ರಾಷ್ಟ್ರಗಳ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಯ ನೇಪಥ್ಯದಲ್ಲಿ ವಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News