ಭಾರತೀಯ ನೆಲೆಯತ್ತ ಬರಲು ಪ್ರಯತ್ನಿಸಿದ್ದ ಚೀನಿ ಸೈನಿಕರಿಂದ ಗಾಳಿಯಲ್ಲಿ ಗುಂಡು: ಭಾರತ

Update: 2020-09-08 18:09 GMT

 ಹೊಸದಿಲ್ಲಿ,ಸೆ.8: ಪೂರ್ವ ಲಡಾಖ್‌ನ ಮುಂಚೂಣಿ ನೆಲೆಯಲ್ಲಿನ ಭಾರತೀಯ ಯೋಧರನ್ನು ಹೆದರಿಸುವ ಪ್ರಯತ್ನವಾಗಿ ಚೀನಿ ಸೈನಿಕರು ಸೋಮವಾರ ಸಂಜೆ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಮಂಗಳವಾರ ಸ್ಪಷ್ಟವಾಗಿ ಹೇಳಿರುವ ಭಾರತವು,ಇದಕ್ಕೂ ಮುನ್ನ ಚೀನಾದ ಜನತಾ ವಿಮೋಚನಾ ಸೇನೆ (ಪಿಎಲ್‌ಎ) ಮಾಡಿದ್ದ ಇಂತಹುದೇ ಆರೋಪವನ್ನು ತಿರಸ್ಕರಿಸಿದೆ.

ಯಾವುದೇ ಹಂತದಲ್ಲಿಯೂ ಭಾರತೀಯ ಯೋಧರು ಎಲ್‌ಎಸಿಯನ್ನು ಅತಿಕ್ರಮಿಸಿಲ್ಲ ಅಥವಾ ಗುಂಡು ಹಾರಾಟ ಸೇರಿದಂತೆ ಯಾವುದೇ ಆಕ್ರಮಣಕಾರಿ ಕ್ರಮಗಳಿಗೆ ಮುಂದಾಗಿಲ್ಲ. ಮಿಲಿಟರಿ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟಗಳಲ್ಲಿ ಮಾತುಕತೆಗಳು ಪ್ರಗತಿಯಲ್ಲಿರುವಾಗಲೇ ಚೀನಿ ಸೇನೆಯು ಒಪ್ಪಂದಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿದೆ ಮತ್ತು ಆಕ್ರಮಣಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಭಾರತೀಯ ಸೇನೆಯು ಹೇಳಿದೆ.

 ಕಳೆದ 45 ವರ್ಷಗಳಲ್ಲಿ 3,488 ಕಿ.ಮೀ.ಉದ್ದದ ಎಲ್‌ಎಸಿಯಲ್ಲಿ ಭಾರತ ಅಥವಾ ಚೀನಾ ಒಂದೇ ಒಂದು ಗುಂಡನ್ನು ಹಾರಿಸಿಲ್ಲ ಮತ್ತು ಸೋಮವಾರ ಗುಂಡಿನ ಹಾರಾಟ ನಡೆದಿರುವುದು ಕಳೆದ ಮೇ ತಿಂಗಳಲ್ಲಿ ಪೂರ್ವ ಲಡಾಖ್‌ನಲ್ಲಿ ಮಿಲಿಟರಿ ಸಂಘರ್ಷ ಆರಂಭಗೊಂಡಾಗಿನಿಂದ ಉದ್ವಿಗ್ನತೆ ಉಲ್ಬಣಿಸಿರುವುದನ್ನು ಬೆಟ್ಟು ಮಾಡಿದೆ. 20 ಭಾರತೀಯ ಮತ್ತು ಅನಿರ್ದಿಷ್ಟ ಸಂಖ್ಯೆಯ ಚೀನಿ ಸೈನಿಕರು ಸಾವನ್ನಪ್ಪಿದ್ದ ಜೂ.15ರ ಗಲ್ವಾನ್ ಘರ್ಷಣೆಗಳ ಸಂದರ್ಭದಲ್ಲಿಯೂ ಗುಂಡುಗಳ ಹಾರಾಟ ನಡೆದಿರಲಿಲ್ಲ.

ಸೋಮವಾರ ಸಂಜೆ 6:15ರ ಸುಮಾರಿಗೆ ಎಲ್‌ಎಸಿಯ ವಿಶಾಲ ಚುಷುಲ್ ಪ್ರದೇಶದಲ್ಲಿಯ ಮುಖಪಾರಿ ಶೃಂಗ ಮತ್ತು ರೆಕಿನ್ ಲಾ ಸಮೀಪಿಸಲು ಚೀನಿ ಸೈನಿಕರ ಪ್ರಯತ್ನವನ್ನು ಗಮನಿಸಿದ ಬಳಿಕ ಭಾರತೀಯ ಯೋಧರು ಕೆಲವು ಎಚ್ಚರಿಕೆ ಗುಂಡುಗಳನ್ನು ಹಾರಿಸಿದ್ದು,ಇದು ಚೀನಿ ಸೈನಿಕರು ತಮ್ಮ ನೆಲೆಗಳಿಗೆ ಮರಳುವಂತೆ ಮಾಡಿತ್ತು ಎಂದು ಕೆಲವು ವರದಿಗಳು ಹೇಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News