ಸಾಮಾಜಿಕ ನ್ಯಾಯ ನಿಷ್ಠುರಿ: ಸರ್ ಸಿದ್ದಪ್ಪ ಕಂಬಳಿ

Update: 2020-09-11 08:45 GMT

ಜಾತಿಯ ತಾರತಮ್ಯವನ್ನು ತೊಡೆದು ಹಾಕಲು ಬಹುಸಂಖ್ಯಾತ ಬ್ರಾಹ್ಮಣೇತರರಿಗೆ ರಾಜಕೀಯ ಪಕ್ಷದ ಅಗತ್ಯತೆಯ ಬಗ್ಗೆ ಅರಿವಿದ್ದಿದ್ದರಿಂದ ಸರ್ ಸಿದ್ದಪ್ಪ ಕಂಬಳಿ ಅವರು ಬ್ರಾಹ್ಮಣೇತರ ಪರಿಷತ್ ಪಕ್ಷವನ್ನು ಕಟ್ಟಿ ಸ್ಥಳೀಯವಾಗಿ ಆ ಪಕ್ಷದ ಮೂಲಕ ಶಾಸನಸಭೆ ಪ್ರವೇಶಿಸಿ, ತಮ್ಮ ಉಸಿರಿರುವವರೆಗೂ ಬ್ರಾಹ್ಮಣೇತರರ ಹಕ್ಕುಗಳಿಗಾಗಿ ಹೋರಾಡಿದರು.


ಭಾರತೀಯ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿದ್ದ ಜಾತಿಯಾಧಾರಿತ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆಯನ್ನು ತೊಡೆದು ಹಾಕಿ ಸಮ ಸಮಾಜ ನಿರ್ಮಾಣದಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಅದಕ್ಕಾಗಿ ಅಹರ್ನಿಶಿ ಹೋರಾಟ ಮಾಡಿದವರು ಅನೇಕರು. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕುಗಳು ನಿರಾಕರಿಸಲ್ಪಟ್ಟು ಅಸಮಾನತೆಯ ಸಂಕೋಲೆಗೆ ಒಳಗಾದ ಶೂದ್ರರು, ಹಿಂದುಳಿದವರು ಮತ್ತು ಅಸ್ಪಶ್ಯರ ಬದುಕು ಅಸಹನೀಯ. ಬಡತನ, ನಿರುದ್ಯೋಗ, ಅವಕಾಶ ವಿಹೀನತೆ, ಆರ್ಥಿಕ ಹಿಂದುಳಿದಿರುವಿಕೆ, ಅಸ್ಪಶ್ಯತೆ, ಮೌಢ್ಯ, ಕಂದಾಚಾರ, ಶೈಕ್ಷಣಿಕ ಹಿಂದುಳಿದಿರುವಿಕೆಯಂತಹ ಸಂಕಷ್ಟಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಬದುಕಬೇಕಾದ ದಾರುಣ ಸ್ಥಿತಿ ಹಿಂದುಳಿದ, ಶೂದ್ರ ಮತ್ತು ತಳಸಮುದಾಯಗಳದ್ದು. ಸಾಮಾಜಿಕ ಶೋಷಣೆ ಮತ್ತು ತಾರತಮ್ಯ ನಿವಾರಣೆಗೆ ಹೋರಾಟ ರೂಪಿಸಿ ಸ್ವಾಭಿಮಾನ ಚಳವಳಿಯನ್ನು ಹುಟ್ಟು ಹಾಕಿದ ಪರ್ಯಾಯ ಪರಂಪರೆಯೇ ಇದೆ. ಶೋಷಣೆ, ದೌರ್ಜನ್ಯ, ವಂಚನೆ ಮತ್ತು ತಾರತಮ್ಯ ಪೋಷಿಸುವ ಪ್ರಧಾನ ವ್ಯವಸ್ಥೆಯ ವಿರುದ್ಧ ಸ್ವಾಭಿಮಾನ ಮತ್ತು ಸಮಾನ ಹಕ್ಕುಗಳಿಗಾಗಿ ನಡೆಸಿದ ಹೋರಾಟದ ಪರ್ಯಾಯ ಪರಂಪರೆಯು ಸಮಾಜದಲ್ಲಿ ಅಂತರ್ಗತವಾಗಿದೆ.

ಬುದ್ಧ, ಚಾರ್ವಾಕರು, ಕಾಪಾಲಿಕರು, ಕಾಳಾಮುಖರು, ಬಸವಣ್ಣ, ಅಲ್ಲಮಪ್ರಭು, ಚೈತನ್ಯ, ರವಿದಾಸ, ಛೋಕಾಮೇಳ, ಸೂಫಿ ಸಂತರು, ಭಕ್ತಿಪಂಥದ ಹರಿಕಾರರು, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಸಯ್ಯಿಜಿರಾವ್ ಗಾಯಕವಾಡ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕೊಲ್ಹಾಪುರದ ಶಾಹೂ ಮಹಾರಾಜರು, ಪೆರಿಯಾರ್, ಮೊದಲಿಯಾರ್ ಸಹೋದರರು ಹಾಗೂ ಅಂಬೇಡ್ಕರ್ ಅಗ್ರಗಣ್ಯರು. ಇಂತಹ ಸಾಧನೆಯನ್ನು ಉತ್ತರ ಕರ್ನಾಟಕದಲ್ಲಿ ಮಾಡಿ ಶೂದ್ರಾತಿಶೂದ್ರ ಜಾತಿಗಳಿಗೆ ಸ್ವಾಭಿಮಾನ, ಸ್ವಂತಿಕೆ ಮತ್ತು ಸಾಮಾಜಿಕ ನ್ಯಾಯ ಒದಗಿಸಿದ ಕರ್ನಾಟಕದ ಹೆಮ್ಮೆಯ ಬ್ರಾಹ್ಮಣೇತರ ಚಳವಳಿಯ ನೇತಾರ ಸರ್ ಸಿದ್ದಪ್ಪಕಂಬಳಿಯವರು. ಬಸವಣ್ಣನ ‘‘ಇವನಾರವ ಇವನಾರವನೆಂದೆನ್ನಿಸದೇ ಇವ ನಮ್ಮವ, ಇವನಮ್ಮವ ಎಂದೆನಿಸಯ್ಯಿ’’ ತತ್ವದ ಆಧಾರದ ಮೇಲೆ ಸ್ವಾಭಿಮಾನ ಚಳವಳಿಯನ್ನು ರೂಪಿಸಿದವರು ಸರ್ ಸಿದ್ದಪ್ಪ ಕಂಬಳಿಯವರು. ಅವರು ನಡೆಸಿದ ಸ್ವಾಭಿಮಾನ ಹೋರಾಟದ ಫಲವಾಗಿ ಶೂದ್ರಾತಿಶೂದ್ರರು ಇಂದು ಸಮಾಜದ ವಿವಿಧ ರಂಗಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತಾಗಿದೆ. ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶಗಳು ಮತ್ತು ಸೌಲಭ್ಯಗಳು ಸಿಗಬೇಕೆಂದು ಹೋರಾಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರೆಯಲು ಕಾರಣೀಭೂತರಾಗಿರುವರು. ಮಹಾರಾಷ್ಟ್ರದಲ್ಲಿ ಜ್ಯೋತಿಬಾಫುಲೆಯವರು ಪ್ರಾರಂಭಿಸಿದ್ದ ಹಕ್ಕೊತ್ತಾಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ನಡೆದ ಹೋರಾಟದಿಂದ ಪ್ರಭಾವಿತರಾಗಿದ್ದ ಹತ್ತು ಹಲವು ಬ್ರಾಹ್ಮಣೇತರ ನಾಯಕರಲ್ಲಿ ಸರ್ ಸಿದ್ದಪ್ಪ ಕಂಬಳಿಯವರು ಅಗ್ರಗಣ್ಯರು. ಬ್ರಿಟಿಷ್ ಆಡಳಿತಗಾರರು ಬ್ರಾಹ್ಮಣೇತರರು ಮತ್ತು ತಳಸಮುದಾಯಗಳಿಗೆ ನೀಡಿದ ಉತ್ತೇಜನದಿಂದ ಪ್ರೇರೇಪಿತರಾದ ಹಿಂದುಳಿದ ಮತ್ತು ಶೂದ್ರ ಜಾತಿಯ ನಾಯಕರು ಸಂಘಟಿತರಾಗಿ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಸಾರ್ವಜನಿಕ ಸೇವೆಗಳು ಮತ್ತು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಟ ಪ್ರಾರಂಭಿಸಿದ್ದರು. ಅಷ್ಟೊತ್ತಿಗಾಗಲೇ ಪುಣೆ, ಮದ್ರಾಸ್, ಮೈಸೂರು, ಕೊಲ್ಹಾಪುರ, ಬರೋಡಾದಂತಹ ಪ್ರಾಂತಗಳಲ್ಲಿ ಸ್ವಾಭಿಮಾನ ಚಳವಳಿಯು ತನ್ನ ಛಾಪು ಮೂಡಿಸಿತ್ತು. ಅದರ ಪರಿಣಾಮವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬ್ರಾಹ್ಮಣೇತರ ಚಳವಳಿಯನ್ನು ಪ್ರಾರಂಭಿಸಿ ಬ್ರಾಹ್ಮಣೇತರರಿಗೆ ಸಾಮಾಜಿಕ ನ್ಯಾಯ ಒದಗಿಸುವ ಐತಿಹಾಸಿಕ ಪಾತ್ರವನ್ನು ಸರ್ ಸಿದ್ದಪ್ಪ ಕಂಬಳಿಯವರು ನಿರ್ವಹಿಸಿದ್ದರು.

ಬ್ರಾಹ್ಮಣೇತರ ಪರಿಷತ್ ಸ್ಥಾಪನೆ: 

ಈರೋಡು ವೆಂಕಪ್ಪನಾಯ್ಕರ ಅವರ ಮಗ ರಾಮಸ್ವಾಮಿ ನಾಯ್ಕರ, ಪೆರಿಯಾರ್ ಎಂದೇ ಖ್ಯಾತರಾಗಿದ್ದ ಅವರು ಮದ್ರಾಸ್ ಪ್ರಾಂತದಲ್ಲಿ ಬ್ರಾಹ್ಮಣೇತರ ಚಳವಳಿಯ ನೇತೃತ್ವ ವಹಿಸಿದ್ದರು. ಸರ್ ಸಿದ್ದಪ್ಪ ಕಂಬಳಿಯವರು ಪೆರಿಯಾರ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಬ್ರಾಹ್ಮಣೇತರರ ಹಿತಾಸಕ್ತಿಗೆ ಸಂಘಟಿತ ಹೋರಾಟವೊಂದೇ ಮಾರ್ಗವೆಂದು ಅವರು ಮನಗಂಡಿದ್ದರು. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಜಸ್ಟಿಸ್ ಪಾರ್ಟಿ ಸ್ಥಾಪಿಸಿ ಬ್ರಾಹ್ಮಣೇತರರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮತ್ತು ಅವರ ಸಹೋದರ ಲಕ್ಷ್ಮಣ ಮೊದಲಿಯಾರ್‌ರ ಸಂಪರ್ಕವನ್ನು ಸರ್ ಸಿದ್ದಪ್ಪ ಕಂಬಳಿಯವರು ಹೊಂದಿದ್ದರು. ಪಿ.ಟಿ. ತ್ಯಾಗರಾಜ್ ಚೆಟ್ಟಿ ಮತ್ತು ಡಾ. ಟಿ.ಎಂ. ನಾಯರ್ ಅವರ ಪ್ರಯತ್ನಗಳಿಂದ ಬ್ರಾಹ್ಮಣೇತರ ಚಳವಳಿಯು ‘ಜಸ್ಟಿಸ್ ಪಾರ್ಟಿ’ ಸ್ಥಾಪನೆಯಲ್ಲಿ ಪರ್ಯಾವಸಾನಗೊಂಡಿತು. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸರ್ ಸಿದ್ದಪ್ಪಕಂಬಳಿಯವರು ಅಂತಹ ಒಂದು ರಾಜಕೀಯ ಸಂಘಟನೆಯ ಅಗತ್ಯತೆಯನ್ನು ಮನಗಂಡು ತಮ್ಮ ಸಹಚರರು ಮತ್ತು ಅನುಯಾಯಿಗಳೊಂದಿಗೆ ಸೇರಿ ಬ್ರಾಹ್ಮಣೇತರ ಪರಿಷತ್‌ನ್ನು 1920 ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಇದೇ ಸಮಯದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಸರ್ ಸಿದ್ದಪ್ಪಕಂಬಳಿಯವರು ಬ್ರಾಹ್ಮಣೇತರ ಚಳವಳಿಯ ಸಾರಥ್ಯವನ್ನು ವಹಿಸಿಕೊಂಡರು.

1920ರಲ್ಲಿ ಹುಬ್ಬಳ್ಳಿಯಲ್ಲಿ ಬ್ರಾಹ್ಮಣೇತರ ಪರಿಷತ್ತಿನ ಸಮ್ಮೇಳನವನ್ನು ಸರ್ ಸಿದ್ದಪ್ಪ ಕಂಬಳಿಯವರ ನೇತೃತ್ವದಲ್ಲಿ ಸಂಘಟಿಸಲಾಯಿತು. ಸಮ್ಮೇಳನದ ಅಧ್ಯಕ್ಷತೆಯನ್ನು ತಮಿಳುನಾಡಿನ ಬ್ರಾಹ್ಮಣೇತರ ನಾಯಕ ಪಿ.ತ್ಯಾಗರಾಜ್‌ರು ವಹಿಸಿಕೊಂಡಿದ್ದರು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ‘‘ಜನಸಂಖ್ಯೆಯ ಶೇ.95ರಷ್ಟು ಬ್ರಾಹ್ಮಣೇತರರು ಇದ್ದರೂ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಗೌಣವಾಗಿದೆ, ಜನಸಂಖ್ಯೆಯ ಶೇ.5ರಷ್ಟಿರುವ ಬ್ರಾಹ್ಮಣರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಆಧಿಪತ್ಯವನ್ನು ಪ್ರತಿಸ್ಥಾಪಿಸಿದ್ದಾರೆ. ಬ್ರಾಹ್ಮಣೇತರರಿಗೆ ಸೂಕ್ತವಾದ ಅವಕಾಶಗಳು ಮತ್ತು ಸೌಲಭ್ಯಗಳು ದೊರೆಯಬೇಕೆಂದರೆ ಅವರ ಜನಸಂಖ್ಯೆಗನುಣವಾಗಿ ಶಾಸನ ಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕು’’ ಎಂದು ಪ್ರತಿಪಾದಿಸಿದರು. ಬ್ರಾಹ್ಮಣೇತರ ಪರಿಷತ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಛತ್ರಪತಿ ಶಾಹೂ ಮಹಾರಾಜರು ಭಾರತೀಯ ಜ್ಞಾನದ ಪರಂಪರೆಯನ್ನು ಜೀವಂತವಾಗಿಟ್ಟುಕೊಂಡು ಬಂದ ಬ್ರಾಹ್ಮಣ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿ, ಆ ಜ್ಞಾನದ ಕೀಲಿ ಕೈಗಳು ಬ್ರಾಹ್ಮಣರಲ್ಲಿಯೇ ಭದ್ರವಾಗಿರುವುದನ್ನು ಪ್ರಸ್ತಾಪಿಸಿ, ‘‘ಬ್ರಾಹ್ಮಣೇತರರಿಗೆ ಜ್ಞಾನವನ್ನು ಧಾರೆ ಎರೆಯುವುದು ಇಂದಿನ ತುರ್ತು ಅಗತ್ಯವಾಗಿದೆ’’ ಎಂದಿದ್ದರು.

1924ರಲ್ಲಿ ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಲು ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ ಹುಬ್ಬಳ್ಳಿಗೂ ಭೇಟಿ ನೀಡಿದ್ದರು. ಹುಬ್ಬಳ್ಳಿಯ ರಾಜಕೀಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸರ್ ಸಿದ್ದಪ್ಪ ಕಂಬಳಿಯವರ ಬಗ್ಗೆ ಕೇಳಿ ತಿಳಿದಿದ್ದ ಮಹಾತ್ಮಾ ಗಾಂಧೀಜಿ ಅವರನ್ನು ಭೇಟಿ ಮಾಡುವ ಇಚ್ಛೆಯನ್ನು ಕಾಂಗ್ರೆಸ್ ಕಾರ್ಯಕರ್ತರ ಕೊಲಗಂಡೆಯವರ ಮುಂದೆ ವ್ಯಕ್ತಪಡಿಸಿದ್ದರು. ಅಷ್ಟೊತ್ತಿಗಾಗಲೇ ಕಂಬಳಿಯವರು ಬ್ರಾಹ್ಮಣೇತರ ನಾಯಕರೆಂದು ಗುರುತಿಸಿಕೊಂಡಿದ್ದರು. ಕೊಲಗಂಡೆಯವರು ಮಹಾತ್ಮಾ ಗಾಂಧೀಜಿಯವರ ಸಂದೇಶವನ್ನು ಮುಟ್ಟಿಸಿದರು. ಗಾಂಧೀಜಿಯವರನ್ನು ಕಾಣಲು ಕಂಬಳಿಯವರು ಸರ್ಕ್ಯೂಟ್ ಹೌಸ್‌ಗೆ ಹೋದರು. ಉಭಯ ಕುಶಲೋಪರಿ ನಂತರ ತೀವ್ರಗೊಂಡ ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಗಾಂಧೀಜಿ ಕಂಬಳಿಯವರನ್ನು ಕೇಳಿಕೊಂಡರು. ಬ್ರಿಟಿಷರ ವಿರುದ್ಧದ ಗಾಂಧೀಜಿಯವರ ಹೋರಾಟಕ್ಕಿಂತ ತನ್ನ ಹೋರಾಟವು ಬ್ರಾಹ್ಮಣೇತರರಿಗೆ ಸ್ವತಂತ್ರ ಬದುಕು ಕಲ್ಪಿಸುವುದಾಗಿದ್ದು, ಬ್ರಿಟಿಷರಲ್ಲಿ ಹಿಂದುಳಿದ ವರ್ಗದ ಜನರಿಗೋಸ್ಕರ ಸವಲತ್ತು ಪಡೆಯಬೇಕೆಂದು ಕಂಬಳಿ ಬಯಸಿದ್ದರು. ಗಾಂಧೀಜಿಯವರ ಅಸಹಕಾರ ಆಂದೋಲನದಿಂದ ಬಹುಸಂಖ್ಯಾತ ಶೂದ್ರ, ಹಿಂದುಳಿದ ಹಾಗೂ ಅಸ್ಪಶ್ಯ ತಳಸಮುದಾಯಗಳಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬುದರ ಅರಿವಿದ್ದ ಕಂಬಳಿಯವರು ಗಾಂಧೀಜಿಯವರ ವಿಚಾರಗಳನ್ನು ಸುತರಾಂ ಒಪ್ಪಲಿಲ್ಲ. ಕಾಂಗ್ರೆಸ್ ಪಕ್ಷ ಸೇರಲು ಇಚ್ಛಿಸಲಿಲ್ಲ. ಗಾಂಧೀಜಿಯವರನ್ನು ಭೇಟಿ ಮಾಡಿದರೂ ಅವರ ಪ್ರಭಾವಕ್ಕೊಳಗಾಗದೆ ಹಾಗೂ ಕಾಂಗ್ರೆಸ್ ಪಕ್ಷ ಸೇರದೆ ಬ್ರಾಹ್ಮಣೇತರ ಪರಿಷತ್ ಪಕ್ಷ ಕಟ್ಟಿ ಅದರಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸನಸಭೆಗೆ ಆಯ್ಕೆಯಾಗಿದ್ದು ಬ್ರಾಹ್ಮಣೇತರರ ರಾಜಕೀಯ ಪ್ರಾತಿನಿಧ್ಯದ ದಿಕ್ಸೂಚಿಯಾಗಿದೆ. ಬ್ರಾಹ್ಮಣರ ಆಧಿಪತ್ಯವೇ ತುಂಬಿಕೊಂಡಿದ್ದ ಕಾಂಗ್ರೆಸ್ ಪಕ್ಷವನ್ನು ಅವರು ಸೇರಲು ಯಾವತ್ತೂ ಇಚ್ಛಿಸಲಿಲ್ಲ. ಬ್ರಾಹ್ಮಣೇತರರಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕಾಂಗ್ರೆಸ್‌ಗೆ ಪರ್ಯಾಯವಾಗಿ ಬ್ರಾಹ್ಮಣೇತರ ಪರಿಷತ್ ಪಕ್ಷವು ನೀಡುವುದು ಎಂಬುದನ್ನು ಸಾಬೀತುಪಡಿಸುವಲ್ಲಿ ಸರ್ ಸಿದ್ದಪ್ಪಕಂಬಳಿಯವರು ಯಶಸ್ವಿಯಾದರು. ಅವರದು ಅತ್ಯಂತ ಕಠಿಣವಾದ ನಿಲುವು.
ಜಾತಿಯ ತಾರತಮ್ಯವನ್ನು ತೊಡೆದು ಹಾಕಲು ಬಹುಸಂಖ್ಯಾತ ಬ್ರಾಹ್ಮಣೇತರರಿಗೆ ರಾಜಕೀಯ ಪಕ್ಷದ ಅಗತ್ಯತೆಯ ಬಗ್ಗೆ ಅರಿವಿದ್ದಿದ್ದರಿಂದ ಸರ್ ಸಿದ್ದಪ್ಪ ಕಂಬಳಿ ಅವರು ಬ್ರಾಹ್ಮಣೇತರ ಪರಿಷತ್ ಪಕ್ಷವನ್ನು ಕಟ್ಟಿ ಸ್ಥಳೀಯವಾಗಿ ಆ ಪಕ್ಷದ ಮೂಲಕ ಶಾಸನಸಭೆ ಪ್ರವೇಶಿಸಿ, ತಮ್ಮ ಉಸಿರಿರುವವರೆಗೂ ಬ್ರಾಹ್ಮಣೇತರರ ಹಕ್ಕುಗಳಿಗಾಗಿ ಹೋರಾಡಿದರು.

Writer - ಸದಾಶಿವ ಮರ್ಜಿ, ಧಾರವಾಡ

contributor

Editor - ಸದಾಶಿವ ಮರ್ಜಿ, ಧಾರವಾಡ

contributor

Similar News