ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ‘ಅಂಕಪಟ್ಟಿ’, ‘ಒತ್ತಡ ಪಟ್ಟಿ’ ಇಲ್ಲ: ಪ್ರಧಾನಿ

Update: 2020-09-13 11:54 GMT

ಹೊಸದಿಲ್ಲಿ, ಸೆ. 12: 2022ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಒಳಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಹೊಂದಿಕೊಳ್ಳುವಂತೆ ಶಾಲಾ ವಿದ್ಯಾರ್ಥಿಗಳು ಹೊಸ ಪಠ್ಯ ಕ್ರಮವನ್ನು ಪರಿಚಯಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಪ್ರಸ್ತುತ ‘ಅಂಕ ಪಟ್ಟಿ’ ವಿದ್ಯಾರ್ಥಿಗಳಿಗೆ ‘ಒತ್ತಡ ಪಟ್ಟಿ’ ಹಾಗೂ ಕುಟುಂಬಕ್ಕೆ ‘ಗೌರವ ಪಟ್ಟಿ’ ಆಗಿದೆ ಎಂದು ಹೇಳಿದ ಪ್ರಧಾನಿ, ಈ ಒತ್ತಡ ನಿವಾರಿಸುವ ಉದ್ದೇಶವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮವನ್ನು ಕಡಿತಗೊಳಿಸಲಿದೆ. ಮೋಜು ಹಾಗೂ ಸಂಪೂರ್ಣ ಅನುಭವದ ಕಲಿಕೆಯನ್ನು ಒಳಗೊಳ್ಳಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

2022ರಲ್ಲಿ ನಡೆಯುವ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಒಳಗೆ ಈ ನೂತನ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗುವುದು ಹಾಗೂ ಸಿದ್ಧಗೊಳಿಸಲಾಗುವುದು ಎಂದು ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ‘ಶಾಲಾ ಶಿಕ್ಷಣ ಸಮಾವೇಶದಲ್ಲಿ’ ಮಾತನಾಡುತ್ತಾ ಪ್ರಧಾನಿ ಅವರು ಹೇಳಿದರು. ನೂತನ ಪಠ್ಯ ಕ್ರಮ ವೈಜ್ಞಾನಿಕವಾಗಿರಲಿದೆ. ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಂವಹನ ಹಾಗೂ ಕೂತೂಹಲವನ್ನು ಉತ್ತೇಜಿಸುವ ನೂತನ ಕೌಶಲವನ್ನು ಈ ಶಿಕ್ಷಣ ನೀತಿ ಒಳಗೊಂಡಿರಲಿದೆ ಎಂದು ಪ್ರಧಾನಿ ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಿಸುವ ಕುರಿತು ಮೈಗವರ್ನಮೆಂಟ್ ಪೋರ್ಟಲ್ ಮೂಲಕ ಅದ್ಯಾಪಕರಿಂದ 15 ಲಕ್ಷ ಸಲಹೆಗಳನ್ನು ಶಿಕ್ಷಣ ಸಚಿವಾಲಯ ಸ್ವೀಕರಿಸಿದೆ ಎಂದು ಅವರು ಹೇಳಿದರು. 5ನೇ ತರಗತಿ ವರೆಗೆ ಮಾತೃಭಾಷೆಯ ಶಿಕ್ಷಣವನ್ನು ಪ್ರತಿಪಾದಿಸಿದ ಪ್ರಧಾನಿ ಅವರು ಭಾಷೆ ಕೇವಲ ಕಲಿಕೆಯ ಮಾಧ್ಯಮ ಹಾಗೂ ಅದರಿಂದಲೇ ಕಲಿಯಲು ಸಾಧ್ಯವಾಗದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News