ಭಾರತ-ಚೀನಾ ಮಾತುಕತೆ ಅಪೂರ್ಣ: ಶೀಘ್ರವೇ ಕಮಾಂಡರ್ ಮಟ್ಟದ ಸಭೆಗೆ ನಿರ್ಧಾರ

Update: 2020-09-12 18:00 GMT

ಹೊಸದಿಲ್ಲಿ, ಸೆ.12: ಪೂರ್ವ ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿರುವ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ತಪ್ಪಿಸುವ ಉದ್ದೇಶದಿಂದ ಶನಿವಾರ ಭಾರತ-ಚೀನಾ ಸೇನೆಗಳ ಮಧ್ಯೆ ಮಾತುಕತೆ ನಡೆದಿದ್ದು, ಉಭಯ ಸೇನೆಗಳೂ ಮುಖಾಮುಖಿ ಸ್ಥಿತಿಯಲ್ಲಿರುವ ಪ್ರದೇಶದಿಂದ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು ಎಂದು ವರದಿಯಾಗಿದೆ. ಆದರೆ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ನಡೆದ ಈ ಸಭೆ ಅಪೂರ್ಣವಾಗಿದ್ದು, ಇದೀಗ ಮುಂದಿನ ಕೆಲ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಮಧ್ಯೆ 6ನೇ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.

ಭಾರತದ 14 ಕಾರ್ಪ್ಸ್ ಕಮಾಂಡರ್ ಲೆಜ ಹರೀಂದರ್ ಸಿಂಗ್ ಮತ್ತು ದಕ್ಷಿಣ ಕ್ಸಿನ್‌ಜಿಯಾಂಗ್ ಸೇನಾ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಲಿಯು ಲಿನ್ ಉಪಸ್ಥಿತಿಯಲ್ಲಿ ಆಗಸ್ಟ್ 2ರ ಬಳಿಕ ಯಾವುದೇ ಸಭೆ ನಡೆದಿಲ್ಲ. ಈಗ ಉಭಯ ಸೇನೆಗಳೂ ಪರಸ್ಪರರನ್ನು ನಂಬದ ಸ್ಥಿತಿಯಿದೆ. ಪಾಂಗ್ಯೋಂಗ್ ತ್ಸೊ- ಚೊಷುಲ್ ಪ್ರದೇಶದಲ್ಲಿ ಚೀನಾ ಯೋಧರು, ಟ್ಯಾಂಕ್‌ಗಳು ಹಾಗೂ ತೋಪುಗಳನ್ನು ನಿಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಯೋಧರ ಸಂಖ್ಯೆಯನ್ನು ಹೆಚ್ಚಿಸಿದ್ದು ಜೊತೆಗೆ ನಿಯಂತ್ರಣ ರೇಖೆಯ ಪಶ್ಚಿಮ ವಲಯ (ಲಡಾಖ್), ಮಧ್ಯ ವಲಯ(ಉತ್ತರಾಖಂಡ, ಹಿಮಾಚಲ ಪ್ರದೇಶ) ಮತ್ತು ಪೂರ್ವ ವಲಯ(ಸಿಕ್ಕಿಂ, ಅರುಣಾಚಲ ಪ್ರದೇಶ)ದಲ್ಲಿ ಶಸ್ತ್ರಸಜ್ಜಿತ ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News